ಚಳಿಗಾಲದಲ್ಲಿ ಚರ್ಮ ಸುಕ್ಕುಗಟ್ಟಿದಂತಾಗುವುದಕ್ಕೆ ಏನು ಮಾಡಬೇಕು?
ಮಂಗಳವಾರ, 2 ಜನವರಿ 2024 (09:25 IST)
ಬೆಂಗಳೂರು: ಚಳಿಗಾಲ ಬಂತೆಂದರೆ ಸಾಕು ಮಹಿಳೆಯರಿಗೆ ಚರ್ಮದ ಕಾಂತಿಯದ್ದೇ ಚಿಂತೆ. ವಿಪರೀತ ಚಳಿಗೆ ಚರ್ಮ ಸುಕ್ಕುಗಟ್ಟಿದಂತಾಗುವುದು, ಬಿಳಿ ಬಣ್ಣಕ್ಕೆ ತಿರುವುದು ಇತ್ಯಾದಿ ಸಹಜ.
ಒಣ ವಾತಾವರಣದಿಂದ ಚರ್ಮವೂ ಬಾಡಿದಂತಾಗುವುದು. ಇದರಿಂದ ತುರಿಕೆ, ಉರಿ, ಸಣ್ಣ ಕಜ್ಜಿಯಂತಹ ಗುಳ್ಳೆಯಾಗುವುದು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದಕ್ಕೆ ಯಾವುದೋ ರಾಸಾಯನಿಕ ಕ್ರೀಂ ಬಳಸುವ ಬದಲು ಮನೆಯಲ್ಲಿಯೇ ಮಾಡಬಹುದಾದ ಸಿಂಪಲ್ ಕೆಲಸ ಮಾಡಿ ನೋಡಿ.
ಪ್ರತಿ ನಿತ್ಯ ಬೆಳಿಗ್ಗೆ ಸ್ನಾನಕ್ಕೆ ಅರ್ಧಗಂಟೆ ಮೊದಲು ಕೊಬ್ಬರಿ ಎಣ್ಣೆ ಅಥವಾ ತುಪ್ಪ ಹಚ್ಚಿ ಚೆನ್ನಾಗಿ ಮೈ ಕೈ ಮಾಲೀಶು ಮಾಡಿಕೊಳ್ಳಿ. ಬಳಿಕ ಮುಖ ಮತ್ತು ಕೈಕಾಲುಗಳಿಗೆ ಚೆನ್ನಾಗಿ ವ್ಯಾಯಾಮ ಮಾಡಿ. ಸ್ನಾನ ಮಾಡುವಾಗ ಅತಿಯಾದ ಬಿಸಿಯಾದ ನೀರು ಬಳಸಬೇಡಿ. ಇದರಿಂದ ಚರ್ಮ ಇನ್ನಷ್ಟು ಒಣಗಿದಂತಾಗುತ್ತದೆ.
ಸ್ನಾನದ ಬಳಿಕ ಮುಖಕ್ಕೆ ಮಾಯಿಶ್ಚರೈಸ್ ಕ್ರೀಂ ಬಳಸಿ. ಇನ್ನೊಂದು ಮುಖ್ಯವಾದ ವಿಚಾರವೆಂದರೆ ಚಳಿಗಾಲದಲ್ಲಿ ಬಾಯಾರಿಕೆ ಕಡಿಮೆ ಎಂದು ನೀರು ಸೇವಿಸದೇ ಇರಬೇಡಿ. ಆದಷ್ಟು ದೇಹದಲ್ಲಿ ನೀರಿನಂಶ ಇರುವಂತೆ ನೋಡಿಕೊಳ್ಳುವುದರಿಂದ ಚರ್ಮವೂ ಕಾಂತಿಯುತವಾಗಿರುತ್ತದೆ. ಅತಿಯಾಗಿ ಬಿಸಿಲಿಗೆ ಮೈ ಒಡ್ಡಬೇಡಿ. ಜೊತೆಗೆ ಸರಿಯಾದ ನಿದ್ರೆ ಮತ್ತು ತಾಜಾ ಹಣ್ಣು, ತರಕಾರಿಗಳನ್ನು ಹಸಿಯಾಗಿ ಹಾಗೇ ಸೇವಿಸುವುದರಿಂದ ಚರ್ಮದ ಕಾಂತಿ ವೃದ್ಧಿಸುತ್ತದೆ.