ಬೆಂಗಳೂರು: ಮುಖದ ಸೌಂದರ್ಯ ವೃದ್ಧಿಗೆ ನಾವು ಯಾವುದೋ ರಾಸಾಯನಿಕಗಳನ್ನು ಬಳಸಿದ ಫೇಸ್ ಪ್ಯಾಕ್ ಬಳಸುವ ಬದಲು ಮನೆಯಲ್ಲಿಯೇ ಮಾಡಿದ ಸಿಂಪಲ್ ಫೇಸ್ ಪ್ಯಾಕ್ ಒಂದನ್ನು ಟ್ರೈ ಮಾಡಬಹುದು. ಅದನ್ನು ಮಾಡುವ ವಿಧಾನ ಇಲ್ಲಿದೆ.
ಮುಖದ ಚರ್ಮ ಕಾಂತಿಯುತವಾಗಿರಬೇಕು, ಕಲೆ ರಹಿತವಾಗಿರಬೇಕು ಎಂದು ಮಾರುಕಟ್ಟೆಯಿಂದ ತಂದ ಫೇಸ್ ಪ್ಯಾಕ್ ಬಳಸಿ ನೋಡಿಯೂ ಯಾವುದೇ ಪ್ರಯೋಜನವಾಗುತ್ತಿಲ್ಲವೆಂಬ ಬೇಸರವೇ? ಹಾಗಿದ್ದರೆ ಮನೆಯಲ್ಲಿಯೇ ಸಿಂಪಲ್ ಆಗಿ ಮಾಡಬಹುದಾದ ಫೇಸ್ ಪ್ಯಾಕ್ ಒಂದನ್ನು ನೋಡೋಣ.
ಇದಕ್ಕೆ ಬೇಕಾಗಿರುವುದು ಹಸಿ ಹಾಲು, ಜೇನು ತುಪ್ಪ ಮತ್ತು ನಿಂಬೆ ರಸ. ಈ ಮೂರನ್ನು ಬಳಸಿದರೆ ಸುಲಭವಾಗಿ ಫೇಸ್ ಪ್ಯಾಕ್ ಒಂದನ್ನು ತಯಾರಿಸಿಕೊಳ್ಳಬಹುದು. ಇದರಿಂದ ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ. ಹೀಗಾಗಿ ಬಳಕೆಗೆ ಸುರಕ್ಷಿತ ಜೊತೆಗೆ ಸುಲಭವೂ ಹೌದು.
ಒಂದು ಟೇಬಲ್ ಸ್ಪೂನ್ ಜೇನು ತುಪ್ಪ ಮತ್ತು ನಿಂಬೆ ರಸಕ್ಕೆ ಎರಡು ಟೇಬಲ್ ಸ್ಪೂನ್ ಹಸಿ ಹಾಲನ್ನು ಬಳಸಿ ಮಿಕ್ಸ್ ಮಾಡಿ. ಇದನ್ನು ಚೆನ್ನಾಗಿ ಪೇಸ್ಟ್ ಮಾಡಿಕೊಂಡು ಮುಖಕ್ಕೆ ಹಚ್ಚಿ. ಹಚ್ಚುವಾಗ ಕುತ್ತಿಗೆವರೆಗೂ ಬರುವಂತೆ ನೋಡಿಕೊಳ್ಳಿ. ಇದನ್ನು ಸುಮಾರು 15 ನಿಮಿಷಗಳವರೆಗೆ ಬಿಟ್ಟು ಬಳಿಕ ಮುಖವನ್ನು ಹದ ಬಿಸಿ ನೀರಿನಲ್ಲಿ ತೊಳೆದುಕೊಳ್ಳಿ. ಈ ರೀತಿ ನಿಯಮಿತವಾಗಿ ಮಾಡುತ್ತಿದ್ದರೆ ನಿಮ್ಮ ಮುಖ ಹೊಳಪಾಗುವುದು.