ಭಜರಂಗಿ ಭಾಯ್ಜಾನ್ ಸಿನಿಮಾದ ಪಾತ್ರಕ್ಕೆ ಸ್ಪೂರ್ತಿಯಾಗಿದ್ದ “ಕರಾಚಿ ಸೆ“ ವಿಡಿಯೋ ಹರಾಜಿಗೆ..!
ಸೋಮವಾರ, 30 ಆಗಸ್ಟ್ 2021 (13:16 IST)
ಬಾಲಿವುಡ್ ಸಿನಿಮಾಗಳನ್ನು ಇಷ್ಟಪಡುವ ಪ್ರತಿಯೊಬ್ಬರೂ ಭಜರಂಗಿ ಭಾಯ್ಜಾನ್ ಚಿತ್ರವನ್ನು ವೀಕ್ಷಿಸಿರುತ್ತಾರೆ. ಆ ಚಿತ್ರದಲ್ಲಿ ಸಲ್ಮಾನ್ ಖಾನ್ ಮಾತ್ರವಲ್ಲ, ಪ್ರತಿಭಾವಂತ ನಟ ನವಾಜುದ್ದೀನ್ ಸಿದ್ದಿಕಿಯ ಅಭಿನಯವನ್ನೂ ಖಂಡಿತಾ ನೆನಪಿಟ್ಟುಕೊಂಡಿರುತ್ತಾರೆ.
ಅದರಲ್ಲೂ , ನವಾಜುದ್ದೀನ್ ಸಿದ್ದಿಕಿ ನಿರ್ವಹಿಸಿರುವ ಚಾಂದ್ ನವಾಬ್ ಎಂಬ ವರದಿಗಾರನ ಪಾತ್ರ, ಕರಾಚಿ ರೈಲ್ವೇ ಸ್ಟೇಶನ್ನಿಂದ ವರದಿ ಮಾಡುವಾಗ ಪ್ರಯಾಣಿಕರಿಂದ ಅಡಚಣೆಗೊಳಗಾಗುವುದು ಹೆಚ್ಚಿನ ಪ್ರೇಕ್ಷಕರ ಮನ ಗೆದ್ದ ದೃಶ್ಯ. ನವಾಜುದ್ದೀನ್ ಸಿದ್ದಿಕಿ ನಿರ್ವಹಿಸಿರುವ ಆ ಪಾತ್ರ, ಪಾಕಿಸ್ತಾನಿ ಟಿವಿ ವರದಿಗಾರ ಚಾಂದ್ ನವಾಬ್ರಿಂದ ಪ್ರೇರಿತವಾದ್ದು ಎಂದು ಬಹಳಷ್ಟು ಮಂದಿಗೆ ತಿಳಿದಿರಲಿಕ್ಕಿಲ್ಲ. ಅದುವರೆಗೆ ಕೇವಲ ಪಾಕಿಸ್ತಾನಿಯರಿಗೆ ಮಾತ್ರ ಪರಿಚಿತರಾಗಿದ್ದ ಅಸಲಿ ಚಾಂದ್ ನವಾಬ್, ಭಜರಂಗಿ ಭಾಯ್ಜಾನ್ ಸಿನಿಮಾ ತೆರೆಗೆ ಬಂದಿದ್ದೇ ತಂಡ ಪಾಕಿಸ್ತಾನದ ಹೊರಗೂ ಜನಪ್ರಿಯರಾದರು. ಅದೇ ಚಾಂದ್ ನವಾಬ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.
ಅವರು ತಮ್ಮ “ಕರಾಚಿ ಸೆ” ವಿಡಿಯೋವನ್ನು ಫೌಂಡೇಶನ್ ಆ್ಯಪ್ನಲ್ಲಿ ನಾನ್ ಫಂಜಿಬಲ್ ಟೋಕನ್ (ಎನ್ಎಫ್ಟಿ) ಆಗಿ ಮಾರಾಟಕ್ಕೆ ಇಟ್ಟಿದ್ದಾರೆ. ಫೌಂಡೇಶನ್ ಆ್ಯಪ್ ತಮ್ಮ ಡಿಜಿಟಲ್ ಆರ್ಟ್ ವರ್ಕ್ ಮೂಲಕ ಡಿಜಿಟಲ್ ಕ್ರೀಯೇಟರ್ಸ್ಗೆ ಹಣ ಗಳಿಸಲು ಸಹಾಯ ಮಾಡುವ ವೇದಿಕೆ. ಚಾಂದ್ ನವಾಬ್ ವಿಡಿಯೋವನ್ನು ಖರೀದಿಸಲು ಕನಿಷ್ಟ ಬಿಡ್ ಸುಮಾರು 46, 74, 700 ರೂ.
“ನಾನು ಚಾಂದ್ ನವಾಬ್, ವೃತ್ತಿಯಲ್ಲಿ ಒಬ್ಬ ಪತ್ರಕರ್ತ ಮತ್ತು ವರದಿಗಾರ. 2008ರಲ್ಲಿ ನನ್ನ ವಿಡಿಯೋವೊಂದು ಯೂಟ್ಯೂಬ್ನಲ್ಲಿ ವೈರಲ್ ಆಗಿತ್ತು. ಅದರಲ್ಲಿ ನಾನು ರೈಲ್ವೇ ಸ್ಟೇಶನ್ನಲ್ಲಿ ಈದ್ ಹಬ್ಬದ ಸಂತಸ ವರದಿ ಮಾಡುವಾಗ ತಡವರಿಸಿದ್ದೆ. ವರದಿ ಮಾಡುವಾಗ ನಾನು ನಿರಂತರವಾಗಿ ಜನರಿಂದ ಅಡಚಣೆಗೊಳಪಡುತ್ತಿದ್ದೆ. ತನ್ನ ತಡವರಿಕೆ ಮತ್ತು ನಿರಂತರ ಅಡಚಣೆ ಆ ವಿಡಿಯೋ ವೈರಲ್ ಆಗಲು ಕಾರಣವಾಗಿ , ಫೇಸ್ಬುಕ್ ಮತ್ತು ಯೂಟ್ಯೂಬ್ನಲ್ಲಿ ಮಿಲಿಯನ್ಗಟ್ಟಲೆ ವೀಕ್ಷಣೆಗಳನ್ನು ಕಂಡಿತು” ಎಂದು ಹರಾಜು ವೇದಿಕೆಯಲ್ಲಿ ಬರೆದುಕೊಂಡಿದ್ದಾರೆ.
“2015ರ ಬ್ಲಾಕ್ಬಸ್ಟರ್ ಸಿನೇಮಾ ಭಜರಂಗಿ ಭಾಯ್ಜಾನ್ನಲ್ಲಿ ನವಾಜುದ್ದೀನ್ ಪಾತ್ರದ ಸೃಷ್ಟಿಗಾಗಿ, ಸಿನಿಮಾ ನಿರ್ದೇಶಕ ಕಬೀರ್ ಖಾನ್ ನನ್ನ ವಿಡಿಯೋದಿಂದ ಪ್ರೇರಣೆಗೊಂಡಾಗ ನಾನು 2016ರಲ್ಲಿ ಮತ್ತೆ ಜನಪ್ರಿಯತೆ ಪಡೆದೆ. ದಿನ ಬೆಳಗಾಗುವುದರೊಳಗೆ ನಾನು ಪ್ರಸಿದ್ಧನಾದೆ.
ಭಾರತ ಮತ್ತು ಪಾಕಿಸ್ತಾನದಿಂದ, ಅದರಲ್ಲೂ ಮುಖ್ಯವಾಗಿ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಹಾಗೂ ಭಜರಂಗಿ ಭಾಯ್ಜಾನ್ ಚಿತ್ರದ ಇತರ ಪಾತ್ರ ವರ್ಗದವರಿಂದ ಬಹಳಷ್ಟು ಪ್ರೀತಿ ಹಾಗೂ ಪ್ರಶಂಸೆಯನ್ನು ಪಡೆದೆ” ಎಂದು ಪಾಕಿಸ್ತಾನಿ ಪತ್ರಕರ್ತ ಚಾಂದ್ ನವಾಬ್ ಬರೆದುಕೊಂಡಿದ್ದಾರೆ.
2008ರಲ್ಲಿ ಆ ವಿಡಿಯೋ ಇಂಟರ್ನೆಟ್ನಲ್ಲಿ ಅಪ್ಲೋಡ್ ಆದಾಗ ಚಾಂದ್ ನವಾಬ್ ಕರಾಚಿ ಮೂಲದ ನ್ಯೂಸ್ ಚಾನಲ್ನಲ್ಲಿ ಕೆಲಸ ಮಾಡುತ್ತಿದ್ದರು. ರೈಲ್ವೇ ಸ್ಟೇಷನ್ನಲ್ಲಿ ಈದ್ ಸಂಭ್ರಮದ ಕುರಿತ ಆ ವಿಡಿಯೋ ವರದಿಯಲ್ಲಿ ಅವರ ತಡವರಿಕೆ, ಪ್ರಯಾಣಿಕರಿಂದ ಅವರಿಗಾಗುತ್ತಿದ್ದ ತೊಂದರೆ ಮತ್ತು ಅದರಿಂದ ಅವರ ಮುಖದಲ್ಲಿ ವ್ಯಕ್ತವಾಗುತ್ತಿದ್ದ ಭಾವನೆಗಳು, ಆ ವಿಡಿಯೋ ವೈರಲ್ ಆಗಲು ಕಾರಣವಾಗಿತ್ತು.