ಮುಂಬೈ: ಫೈಟರ್ ಸಿನಿಮಾದಲ್ಲಿ ವಾಯುಪಡೆ ಅಧಿಕಾರಿಗಳಾಗಿ ಕಾಣಿಸಿಕೊಂಡಿದ್ದ ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ ಗೆ ಈಗ ವಾಯುಪಡೆ ಲೀಗಲ್ ನೋಟಿಸ್ ನೀಡಿದೆ.
ಸಿನಿಮಾದಲ್ಲಿ ಇಬ್ಬರೂ ನಾಯಕ-ನಾಯಕಿಯಾಗಿ ಅಭಿನಯಿಸಿದ್ದು, ವಾಯುಪಡೆ ಅಧಿಕಾರಿಗಳಾಗಿರುತ್ತಾರೆ. ಇಬ್ಬರ ರೊಮ್ಯಾಂಟಿಕ್ ದೃಶ್ಯಗಳೂ ಇವೆ. ಆದರೆ ವಾಯುಪಡೆ ದಿರಿಸಿನಲ್ಲಿ ಚುಂಬನ, ರೊಮ್ಯಾಂಟಿಕ್ ದೃಶ್ಯಗಳನ್ನು ಮಾಡಿದ್ದಕ್ಕೆ ವಾಯುಪಡೆ ದೀಪಿಕಾ ಮತ್ತು ಹೃತಿಕ್ ಇಬ್ಬರಿಗೂ ಲೀಗಲ್ ನೋಟಿಸ್ ನೀಡಿದೆ.
ವಾಯುಪಡೆ ಆರೋಪವೇನು?
ವಾಯುಪಡೆಗೆ ಅದರದ್ದೇ ಆದ ಗೌರವವಿದೆ. ಅದರ ಸಮವಸ್ತ್ರ ತ್ಯಾಗ, ಶಿಸ್ತು ಮತ್ತು ದೇಶಕ್ಕಾಗಿ ಸೇವೆ ಸಲ್ಲಿಸುವ ಬದ್ಧತೆಯ ಪ್ರತೀಕವಾಗಿದೆ. ಆದರೆ ಸಿನಿಮಾದಲ್ಲಿ ಈ ಸಮವಸ್ತ್ರ ಧರಿಸಿ ರೊಮ್ಯಾಂಟಿಕ್ ದೃಶ್ಯಗಳಲ್ಲಿ ಭಾಗಿಯಾಗಿದ್ದು ವಾಯುಪಡೆಯ ಘನತೆಗೆ ಧಕ್ಕೆ ತಂದಂತೆ. ಇಂತಹ ದೃಶ್ಯಗಳನ್ನು ಸಿನಿಮಾದಲ್ಲಿ ತೋರಿಸಿ ವಾಯುಪಡೆಗೆ ಅವಮಾನ ಮಾಡಲಾಗಿದೆ. ದೇಶಕ್ಕಾಗಿ ತ್ಯಾಗ ಮಾಡಿದ ಅಸಂಖ್ಯಾತ ಅಧಿಕಾರಿಗಳಿಗೆ ಇದು ಅವಮಾನ. ವಾಯುಪಡೆ ಸಮವಸ್ತ್ರ ಧರಿಸಿ ಕೆಲವು ಅಹಿತಕಾರಿ ಸನ್ನಿವೇಶಗಳನ್ನು ತೋರಿಸುವ ಮೂಲಕ ವಾಯುಪಡೆಯನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ನೋಟಿಸ್ ನಲ್ಲಿ ಹೇಳಲಾಗಿದೆ.
ವಿಶೇಷವಾಗಿ ಕಿಸ್ಸಿಂಗ್ ದೃಶ್ಯದ ಬಗ್ಗೆ ಉಲ್ಲೇಖಿಸಿರುವ ವಾಯುಪಡೆ ಟೆಕ್ನಿಕಲ್ ಏರಿಯಾದ ಹಿನ್ನಲೆಯಲ್ಲಿ ವಾಯುಪಡೆ ಸಮವಸ್ತ್ರ ಧರಿಸಿ ಕಿಸ್ಸಿಂಗ್ ದೃಶ್ಯ ಮಾಡಿರುವುದು, ಐಎಎಫ್ ಅಧಿಕಾರಿ ಮಾಡುವಂತಹ ಕೆಲಸವೇ ಅಲ್ಲ. ವಾಯುಪಡೆ ಅಧಿಕಾರಿಗಳು ಅತ್ಯಂತ ಶಿಸ್ತುಬದ್ಧರಾಗಿರುತ್ತಾರೆ. ಆದರೆ ಇಂತಹ ದೃಶ್ಯಗಳನ್ನು ತೋರಿಸುವ ಮೂಲಕ ಸಿನಿಮಾದಲ್ಲಿ ಘನತೆ ಧಕ್ಕೆ ತರಲಾಗಿದೆ ಎಂದು ಆರೋಪಿಸಲಾಗಿದೆ.
ಜನವರಿ 25 ರಂದು ಫೈಟರ್ ಸಿನಿಮಾ ಬಿಡುಗಡೆಯಾಗಿತ್ತು. ಬಾಕ್ಸ್ ಆಫೀಸ್ ನಲ್ಲಿ 300 ಕೋಟಿ ಕಲೆಕ್ಷನ್ ಮಾಡಿದ್ದ ಸಿನಿಮಾ ಹಿಟ್ ಸಿನಿಮಾ ಲಿಸ್ಟ್ ಗೆ ಸೇರ್ಪಡೆಯಾಗಿತ್ತು. ಸಿನಿಮಾದಲ್ಲಿ ಹೃತಿಕ್, ದೀಪಿಕಾ ಜೋಡಿಯಾಗಿದ್ದರೆ, ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್, ಸಂಜೀದಾ ಶೇಖ್ ಮುಂತಾದ ಕಲಾವಿದರು ಅಭಿನಯಿಸಿದ್ದರು.