ಕ್ರೀಡಾಕೂಟವನ್ನು ಲೈಂಗಿಕ ವಿಷಯ ಹೈಜಾಕ್ ಮಾಡುವುದು ಸರಿಯೇ?: ಕಂಗನಾ ಪ್ರಶ್ನೆ

Sampriya

ಭಾನುವಾರ, 28 ಜುಲೈ 2024 (14:28 IST)
Photo Courtesy X
ಪ್ಯಾರಿಸ್‌: ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭದಲ್ಲಿ ಡ್ರ್ಯಾಗ್ ಕ್ವೀನ್‌ಗಳು ಪ್ರದರ್ಶಿಸಿದ ಇಟಲಿಯ ಖ್ಯಾತ ಕಲಾವಿದ ಲಿಯೊನಾರ್ಡೊ ದಾ ವಿಂಚಿ ಅವರ ದಿ ಲಾಸ್ಟ್ ಸಪ್ಪರ್ ಪೇಂಟಿಂಗ್‌ನ ವಿಡಂಬನೆಗೆ ಸಂಬಂಧಿಸಿದ ಪ್ರದರ್ಶನ ಬಗ್ಗೆ ಬಿಜೆಪಿ ಸಂಸದೆ, ನಟಿ ಕಂಗನಾ ರಾವತ್‌ ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ಒಲಿಂ‍ಪಿಕ್ಸ್ ಕ್ರೀಡಾಕೂಟಕ್ಕೆ ಶುಕ್ರವಾರ ಸಂಜೆ ಪ್ಯಾರಿಸ್‌ನಲ್ಲಿ ಚಾಲನೆ ದೊರೆಯಿತು. ಭಾರತದ 117 ಅಥ್ಲೀಟ್‌ಗಳೂ ಸೇರಿದಂತೆ ವಿಶ್ವದಾದ್ಯಂತ 10,500ಕ್ಕೂ ಅಧಿಕ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ.

ಉದ್ಘಾಟನಾ ಸಮಾರಂಭದ ಫೆಸ್ಟಿವಿಟಿ ವಿಭಾಗದಲ್ಲಿ ಫ್ರಾನ್ಸ್‌ನ ಮೂವರು ಡ್ರ್ಯಾಗ್ ರೇಸ್ ಸ್ಪರ್ಧಿಗಳು ಸೇರಿದಂತೆ 18 ಮಂದಿ ನಡೆಸಿಕೊಟ್ಟ ಡ್ರ್ಯಾಗ್ ಆಕ್ಟ್ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆಗೆ ಗುರಿಯಾಗಿದೆ. ಸೆನ್ ನದಿ ಬಳಿ ಉದ್ದದ ಮೇಜುಗಳನ್ನು ಹಾಕಿ ನದಿ ಮತ್ತು ಐಫೆಲ್ ಟವರ್ ಬ್ಯಾಕ್ ಡ್ರಾಪ್‌ನಲ್ಲಿ ಈ ಪ್ರದರ್ಶನ ನಡೆದಿತ್ತು.

ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕಂಗನಾ, ಒಲಿಂಪಿಕ್ಸ್ 2024 ಅನ್ನು ಎಡಪಂಥೀಯರು ಸಂಪೂರ್ಣವಾಗಿ ಹೈಜಾಕ್ ಮಾಡಿದ್ದಾರೆ. ಇದು ನಾಚಿಕೆಗೇಡು ಎಂದು ಬರೆದುಕೊಂಡಿದ್ದಾರೆ.

ಪ್ರದರ್ಶನಕಾರರ ಮತ್ತೊಂದು ಕೊಲಾಜ್ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕಂಗನಾ, ಉದ್ಘಾಟನಾ ಸಮಾರಂಭದಲ್ಲಿ ಇದೊಂದು ಸಲಿಂಗ ಕಾಮದ ಕುರಿತಾದ ಪ್ರದರ್ಶನವಾಗಿತ್ತು. ನಾನು ಸಲಿಂಗ ಕಾಮದ ವಿರೋಧಿಯಲ್ಲ. ಆದರೆ, ಲೈಂಗಿಕತೆಗೂ ಒಲಿಂಪಿಕ್ಸ್‌ಗೂ ಏನು ಬಂಧವಿದೆ. ಈ ಕ್ರೀಡಾಕೂಟವನ್ನು ಒಂದು ಲೈಂಗಿಕ ವಿಷಯ ಹೈಜಾಕ್ ಮಾಡುವುದು ಸರಿಯೇ? ಸೆಕ್ಸ್ ಏಕೆ ನಮ್ಮ ಬೆಡ್‌ರೂಮ್‌ಗಳಿಗೆ ಸೀಮಿತವಾಗಿರಬಾರದು? ಇದು ವಿಚಿತ್ರ!! ಎಂದು ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ