ಸುಷ್ಮಾ ಸ್ವರಾಜ್ ಸಹಾಯ ಕೋರಿದ ಮಲ್ಲಿಕಾ ಶೆರಾವತ್

ರಾಮಕೃಷ್ಣ ಪುರಾಣಿಕ

ಗುರುವಾರ, 15 ಫೆಬ್ರವರಿ 2018 (13:31 IST)
ನಟಿ ಮಲ್ಲಿಕಾ ಶೆರಾವತ್ ಫ್ರೀ-ಎ-ಗರ್ಲ್ ಎನ್‌ಜಿಓದ ಸಹ-ಸಂಸ್ಥಾಪಕರಿಗೆ ಭಾರತೀಯ ವೀಸಾವನ್ನು ನೀಡುವ ಕುರಿತು ಸಹಾಯ ಮಾಡಬೇಕೆಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ಗೆ ಒತ್ತಾಯಿಸಿದರು.

ಪದೇ ಪದೇ ತಿರಸ್ಕೃತಗೊಂಡಿರುವ ಎನ್‌ಜಿಓದ ಸಹ-ಸಂಸ್ಥಾಪಕರಾದ ಎವೆಲಿನ್ ಹೊಲ್‌ಸ್ಕೇನ್ ಅವರ ವೀಸಾ ಅರ್ಜಿಯನ್ನು ಅನುಮೋದಿಸುವಂತೆ ವಿನಂತಿ ಮಾಡಿಕೊಂಡಿದ್ದಾರೆ. ಭಾರತದಲ್ಲಿನ ಮಕ್ಕಳ ಕಳ್ಳಸಾಗಣೆ ಮತ್ತು ಮಕ್ಕಳ ಮೇಲಿನ ಲೈಂಗಿಕ ಶೋಷಣೆಯ ವಿರುದ್ಧ ಹೋರಾಡುವ ಫ್ರೀ-ಎ-ಗರ್ಲ್ ಜೊತೆಗೆ ಮಲ್ಲಿಕಾ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
 
"ಮೇಡಂ ಸುಷ್ಮಾ ಸ್ವರಾಜ್ ಅವರೇ, ಡಚ್ ಎನ್‌ಜಿಓ ಫ್ರೀ-ಎ-ಗರ್ಲ್ ಸಹ-ಸಂಸ್ಥಾಪಕರ ಭಾರತದ ವೀಸಾವನ್ನು ಪದೇ ಪದೇ ನಿರಾಕರಿಸಲಾಗಿದೆ. ಮಕ್ಕಳು ಮತ್ತು ಮಹಿಳೆಯರ ಕಳ್ಳಸಾಗಣೆಯ ವಿರುದ್ಧ ಅತ್ಯುತ್ತಮವಾದ ಕೆಲಸವನ್ನು ಮಾಡುತ್ತಿದ್ದಾರೆ. ದಯವಿಟ್ಟು ಸಹಾಯ ಮಾಡಿ!" ಎಂದು ಮಲ್ಲಿಕಾ ಶೆರಾವತ್ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಸೋಮವಾರ ಟ್ವೀಟ್ ಮಾಡಿದ್ದಾರೆ.
 
ಮಲ್ಲಿಕಾ ಅವರು ಫ್ರೀ-ಎ-ಗರ್ಲ್ ಎನ್‌ಜಿಓದ ಅನನ್ಯ ಕಾರ್ಯಕ್ರಮವಾದ "ಸ್ಕೂಲ್ ಫಾರ್ ಜಸ್ಟಿಸ್" ನ ಬ್ರಾಂಡ್ ಅಂಬಾಸಿಡರ್ ಆಗಿದ್ದು, ಇದು ವೇಶ್ಯಾಗೃಹಗಳಿಂದ ಪಾರುಮಾಡಿದ ಹುಡುಗಿಯರಿಗೆ ವಕೀಲರಾಗಲು ಮತ್ತು ಕಾನೂನಿನ ವ್ಯವಸ್ಥೆಯಲ್ಲಿ ಕೆಲಸ ಮಾಡಲು ಸಹಾಯ ಮಾಡುವ ಸಲುವಾಗಿ ಶಿಕ್ಷಣ, ತರಬೇತಿ ಮತ್ತು ಬೆಂಬಲವನ್ನು ನೀಡುವ ಮೂಲಕ ಸಹಾಯ ಮಾಡುತ್ತದೆ.
 
"ನಾನು ಸಮಸ್ಯೆಯ ಪರಿಹಾರದ ಕುರಿತು ಬಹಳ ನಂಬಿಕೆಯನ್ನು ಹೊಂದಿದ್ದೇನೆ ಮತ್ತು ಇದಕ್ಕೆ ಸರ್ಕಾರವು ಬೆಂಬಲ ನೀಡಬೇಕೆಂದು ಹಾಗೂ ಭಾರತೀಯ ಮಕ್ಕಳ ಮತ್ತು ಮಹಿಳೆಯರ ಪ್ರಯೋಜನಕ್ಕಾಗಿ ನಿರಂತರವಾಗಿ ಕೆಲಸ ಮಾಡುತ್ತಿರುವ ಸಹ-ಸಂಸ್ಥಾಪಕರಿಗೆ ವೀಸಾ ಸೌಲಭ್ಯವನ್ನು ನೀಡಬೇಕೆಂದು ಕೋರಿಕೊಳ್ಳುತ್ತೇನೆ. ಸುಷ್ಮಾ ಸ್ವರಾಜ್ ಅವರು ಯಾವಾಗಲೂ ಇಂತಹ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ ಮತ್ತು ನಾನು ಅವರಿಂದ ಧನಾತ್ಮಕ ಪ್ರತಿಕ್ರಿಯೆಯನ್ನು ಪಡೆಯಲು ಬಯಸುತ್ತಿದ್ದೇನೆ," ಎಂದು ಮಲ್ಲಿಕಾ ಹೇಳಿಕೆಯೊಂದನ್ನು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ