ಎಲ್ಲ ರಾಜ್ಯಗಳೂ ₹50 ಸಾವಿರ ಕೋವಿಡ್ ಪರಿಹಾರ ನೀಡಲೇಬೇಕು: ಸುಪ್ರೀಂ

ಮಂಗಳವಾರ, 5 ಅಕ್ಟೋಬರ್ 2021 (12:30 IST)
ನವದೆಹಲಿ : ಮರಣ ಪ್ರಮಾಣಪತ್ರದಲ್ಲಿ ಸಾವಿಗೆ ಕಾರಣ ನೀಡಿಲ್ಲ ಎಂಬ ಕಾರಣ ಮುಂದಿಟ್ಟು ಕೋವಿಡ್ನಿಂದ ಮೃತಪಟ್ಟವರಿಗೆ ₹50 ಸಾವಿರ ಪರಿಹಾರ ನೀಡಿಕೆಗೆ ಯಾವ ರಾಜ್ಯವೂ ತಡೆ ಒಡ್ಡಬಾರದು ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ಡಿಎಂಎ) ಶಿಫಾರಸು ಮಾಡಿದಂತೆ ಕೋವಿಡ್ನಿಂದ ಮೃತಪಟ್ಟವರಿಗೆ ₹50 ಸಾವಿರ ಎಕ್ಸ್ಗ್ರೇಷಿಯಾ ಪರಿಹಾರ ನೀಡಬೇಕು. ಕೋವಿಡ್ನಿಂದ ಸಾವು ಸಂಭವಿಸಿದೆ ಎಂದು ಸೂಚಿಸಿ ಪ್ರಮಾಣಪತ್ರ ಸಲ್ಲಿಸಿದ 30 ದಿನಗಳ ಒಳಗೆ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಈ ಪರಿಹಾರ ಮೊತ್ತವನ್ನು ಪಾವತಿಸಬೇಕು ಎಂದು ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಎ.ಎಸ್.ಬೋಪಣ್ಣ ಅವರಿದ್ದ ಪೀಠ ಹೇಳಿತು.
ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಈ ವಿಷಯಕ್ಕೆ ಅತಿ ಹೆಚ್ಚಿನ ಪ್ರಚಾರ ನೀಡಬೇಕು ಎಂದು ಸಹ ಪೀಠವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಿತು.
ಎನ್ಡಿಎಂಎ ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಒಪ್ಪಿಕೊಂಡ ಪೀಠ, ಈಗಾಗಲೇ ಮರಣ ಪ್ರಮಾಣಪತ್ರ ನೀಡಲಾಗಿದ್ದರೆ, ನೊಂದ ಕುಟುಂಬ ಸೂಕ್ತ ಪ್ರಾಧಿಕಾರವನ್ನು ಸಂಪರ್ಕಿಸಬಹುದಾಗಿದೆ ಎಂದು ಪೀಠ ಹೇಳಿತು.
ಆರ್ಟಿಪಿಸಿಆರ್ ಪರೀಕ್ಷೆಯಂತಹ ಅಗತ್ಯ ದಾಖಲೆಗಳೊಂದಿಗೆ ಮರಣ ಪ್ರಮಾಣಪತ್ರವನ್ನು ಬದಲಿಸಬಹುದಾಗಿದೆ ಎಂದು ಹೇಳಿದ ಪೀಠ, ನೊಂದ ಕುಟುಂಬಗಳಿಗೆ ಮತ್ತೂ ತೊಡಕು ಮುಂದುವರಿದಿದ್ದೇ ಆದರೆ ಕುಂದುಕೊರತೆ ಪರಿಹಾರ ಸಮಿತಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಸಲಹೆ ನೀಡಿತು.
'ಕೋವಿಡ್ನಿಂದ ಮೃತಪಟ್ಟಿದ್ದಾರೆ ಎಂಬ ಉಲ್ಲೇಖ ಮರಣ ಪ್ರಮಾಣಪತ್ರದಲ್ಲಿ ಇಲ್ಲ ಎಂಬ ಕಾರಣ ನೀಡಿ ಎಕ್ಸಗ್ರೇಷಿಯಾ ಪರಿಹಾರವನ್ನು ನೀಡುವುದಿಲ್ಲ ಎಂದು ಯಾವ ರಾಜ್ಯವೂ ಹೇಳುವಂತಿಲ್ಲ. ದೂರು ಪರಿಹಾರ ಸಮಿತಿಯು ಮೃತ ರೋಗಿಗಳ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿ 30 ದಿನಗಳೊಳಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಸೂಚನೆ ನೀಡಬೇಕು' ಎಂದು ಪೀಠ ನಿರ್ದೇಶನ ನೀಡಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ