ಕೊರೊನಾ ವೈರಸ್ ; ಸತ್ಯಾಂಶ ತಿಳಿಯಲು ಯೋಧರ ನೇಮಕ

ಶನಿವಾರ, 21 ಮಾರ್ಚ್ 2020 (15:27 IST)
ರಾಜ್ಯ ಸರ್ಕಾರವು ಕೊರೋನಾ ಹರಡುವಿಕೆ ತಡೆಯಲು ಹಾಗೂ ಅದರ ನಿಯಂತ್ರಣಕ್ಕೆ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಕೊರೋನಾ ವೈರಸ್ ಬಗ್ಗೆ ಹರಡುವ ವದಂತಿಗಳು ಹಾಗೂ ಅಪಪ್ರಚಾರಗಳನ್ನು ತಡೆದು ಜನರಿಗೆ ನೈಜ ಮಾಹಿತಿ ಒದಗಿಸಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಭಾರತೀಯ ರೆಡ್‌ ಕ್ರಾಸ್ ಸೊಸೈಟಿ ಹಾಗೂ ಕರ್ನಾಟಕ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಪ್ರಾರಂಭಿಸಿರುವ ಕಾರ್ಯಕ್ರಮಕ್ಕೆ ಸ್ವಯಂ ಸೇವಕರನ್ನು ಆಹ್ವಾನಿಸಿದೆ.
ಸರ್ಕಾರದೊಂದಿಗೆ ಕೈಜೋಡಿಸಿ ಕೊರೋನಾ ವಿರುದ್ಧ ಹೋರಾಡಲು ಇದೊಂದು ಸದಾವಕಾಶವಾಗಿದೆ.

 ‘ಕೊರೋನಾ ಯೋಧ’ ರೆಂದೇ ಕರೆಯಲ್ಪಡುವ ಈ ಸ್ವಯಂ ಸೇವಕರು ರಾಜ್ಯಾದ್ಯಂತ ಎಲ್ಲಾ ತಾಲ್ಲೂಕುಗಳಲ್ಲಿ ಹರಡುವ ವದಂತಿಗಳ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನೈಜ ಮಾಹಿತಿಯನ್ನು ಜನರಿಗೆ ತಲುಪಿಸಲು ಸಹಕಾರಿಯಾಗಲಿದ್ದಾರೆ.

 ಅಲ್ಲದೇ ಸ್ಥಳೀಯವಾಗಿ ಕೊರೋನಾ ಸಂಬಂಧಿತ ವಿದ್ಯಮಾನಗಳನ್ನು ತಂಡದ ಗಮನಕ್ಕೆ ತರಲು ಕ್ರಮ ವಹಿಸುವರು.
ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿಗಳು ಸ್ವೀಕೃತವಾಗುತ್ತಿದ್ದು, ನೊಂದಾಯಿತ ಸ್ವಯಂ ಸೇವಕರಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಎಲ್ಲಾ ಜಿಲ್ಲಾ ಕಚೇರಿಗಳಲ್ಲಿ ಸೂಕ್ತ ತರಬೇತಿ, ಸುರಕ್ಷತಾ ಕಿಟ್ ಹಾಗೂ ಗುರುತಿನ ಚೀಟಿಯನ್ನು ನೀಡಲಾಗುವುದು.

ರಾಜ್ಯದ ಪ್ರತಿ ತಾಲ್ಲೂಕಿನಲ್ಲಿ ಕನಿಷ್ಟ 4 ಸ್ವಯಂಸೇವಕರು ದಿನಕ್ಕೆ ನಾಲ್ಕು ಪಾಳಿಗಳಲ್ಲಿ ಕಾರ್ಯ ನಿರ್ವಹಿಸುವರು. ಬೆಂಗಳೂರು ನಗರದಲ್ಲೆ ಸುಮಾರು 120 ಸ್ವಯಂ ಸೇವಕರಿಗೆ ಅವಕಾಶವಿದ್ದು, ರಾಜ್ಯಾದ್ಯಂತ ಸುಮಾರು 3000 ಕೊರೋನಾ ಯೋಧರು ನೊಂದಾಯಿಸುವ ನಿರೀಕ್ಷೆಯಿದೆ. ಆನ್‌ಲೈನ್ ಅರ್ಜಿ ಮೂಲಕ ಮೊದಲ ದಿನವೇ 400 ಕ್ಕೂ ಹೆಚ್ಚು ಸ್ವಯಂ ಸೇವಕರು ನೋಂದಾಯಿಸಿಕೊಂಡಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ