ನೆಗೆಟಿವ್ ವರದಿ ಇದ್ದರಷ್ಟೇ ಸೇವೆಗೆ ಅವಕಾಶ

ಮಂಗಳವಾರ, 12 ಅಕ್ಟೋಬರ್ 2021 (07:58 IST)
ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವರ ದರ್ಶನ ಮತ್ತು ಸೇವೆಗಳನ್ನು ನೆರವೇರಿಸಲು ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯವಾಗಿದೆ.

2 ಡೋಸ್ ಲಸಿಕೆ ಪಡೆದ ಮತ್ತು 72 ಗಂಟೆ ಮುಂಚಿತವಾಗಿ ಆರ್ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿದ್ದರೆ ಮಾತ್ರ ಸೇವೆಗೆ ಅವಕಾಶ ಮಾಡಿಕೊಡಲಾಗುತ್ತಿದೆ.
ಸೇವೆ ಮತ್ತು ದರ್ಶನ ಸಂದರ್ಭ ಕಡ್ಡಾಯವಾಗಿ ಮಾಸ್ಕ್ ಧಾರಣೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅಲ್ಲಲ್ಲಿ ಭದ್ರತಾ ಸಿಬಂದಿ ನಿಯೋಜಿಸಲಾಗಿದೆ ಮಾತ್ರವಲ್ಲದೇ ಈ ಸಿಬಂದಿ ಭಕ್ತರಿಗೆ ಕೋವಿಡ್ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.
100 ಸರ್ಪಸಂಸ್ಕಾರ ಸೇವೆ
ಪ್ರತಿದಿನ 100 ಭಕ್ತರಿಗೆ ಮಾತ್ರ ಸರ್ಪಸಂಸ್ಕಾರ ಸೇವೆ ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ದಿನ 25 ನಾಗಪ್ರತಿಷ್ಠೆ, 4 ಪಂಚಾಮೃತ ಮಹಾಭಿಷೇಕಕ್ಕೆ ಮಾತ್ರ ಅವಕಾಶವಿದೆ. ಪ್ರತಿ ದಿನ 4 ಪಾಳಿಯಲ್ಲಿ ಆಶ್ಲೇಷಾ ಬಲಿ ಸೇವೆ ನಡೆಯುತ್ತಿದ್ದು, ಒಂದು ಪಾಳಿಯಲ್ಲಿ 70 ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಸೇವೆಗೆ ಪ್ರತಿ ರಸೀದಿಯಿಂದ 2 ಜನ ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ.
ಸ್ವಚ್ಚತೆಗೆ ಆದ್ಯತೆ
ದೇಗುಲ ಮತ್ತು ಷಣ್ಮುಖ ಪ್ರಸಾದ ಭೋಜನ ಶಾಲೆಯನ್ನು ಪ್ರತಿದಿನ ತೊಳೆದು ಸ್ವಚ್ಚ ಮಾಡಿ ವೈರಾಣು ತಡೆ ಔಷಧ ಸಿಂಪಡಿಸಲಾಗುತ್ತಿದೆ. ಭಕ್ತರಿಗೆ ಸೂಕ್ತ ಮಾಹಿತಿಗಳನ್ನು ನೀಡಲು ಅಲ್ಲಲ್ಲಿ ಸೂಚನಾ ಫಲಕವನ್ನು ಅಳವಡಿಸಲಾಗಿದೆ.
ದೇಗುಲದಲ್ಲಿ ಲಸಿಕೆ ಕೇಂದ್ರ ಶ್ರೀ ದೇಗುಲದ ರಾಜಗೋಪುರದ ಬಳಿ ಲಸಿಕಾ ಕೇಂದ್ರವಲ್ಲದೇ ಆರ್ಟಿಪಿಸಿಆರ್ ಪರೀಕ್ಷಾ ಕೇಂದ್ರವನ್ನು ತೆರೆಯಲಾಗಿದೆ. ಭಕ್ತರು ಮತ್ತು ಸಾರ್ವಜನಿಕರ ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ದೇಗುಲದ ಎಲ್ಲ ಸಿಬಂದಿ ಎರಡು ಡೋಸ್ ಕೋವಿಡ್ ಲಸಿಕೆ ಪಡೆದುಕೊಂಡಿದ್ದು, ಆಗಾಗ್ಗೆ ಆರ್ಟಿಪಿಸಿಆರ್ ಪರೀಕ್ಷೆ ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ