ಹೈದರಾಬಾದ್(ಜು.13): ದೇಶದಲ್ಲಿ ಯಾವುದೇ ಸಮಯದಲ್ಲಿ ಬೇಕಾದರೂ ಕೊರೋನಾದ 3ನೇ ಅಲೆ ಆರಂಭವಾಗಬಹುದು ಎಂದು ಎಲ್ಲರೂ ಹೇಳುತ್ತಿದ್ದರೆ, ಹೈದರಾಬಾದ್ನ ವೈದ್ಯಕೀಯ ತಜ್ಞರೊಬ್ಬರು ಜು.4ಕ್ಕೇ ದೇಶದಲ್ಲಿ 3ನೇ ಅಲೆ ಆರಂಭವಾಗಿದೆ ಎಂದು ತಮ್ಮದೇ ಲೆಕ್ಕಾಚಾರದ ಮೂಲಕ ಪ್ರತಿಪಾದಿಸಿದ್ದಾರೆ.
ಹೈದರಾಬಾದ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಯೂ ಆಗಿರುವ ಖ್ಯಾತ ವೈದ್ಯ ಡಾ.ವಿಪಿನ್ ಶ್ರೀವಾಸ್ತವ ಅವರು ಕಳೆದ 15 ತಿಂಗಳಲ್ಲಿ ಸಂಭವಿಸಿದ ಸಾವು ಹಾಗೂ ಸೋಂಕಿನ ದೈನಂದಿನ ಸಂಖ್ಯೆಯನ್ನು ಆಧರಿಸಿ ಲೆಕ್ಕಾಚಾರವೊಂದನ್ನು ಮಾಡಿದ್ದಾರೆ. ಅದಕ್ಕೆ ಡೈಲಿ ಡೆತ್ ಲೋಡ್ (ಡಿಡಿಎಲ್) ಎಂದು ಹೆಸರಿಟ್ಟಿದ್ದಾರೆ. ಅದರಡಿ 441 ದಿನಗಳ ಸಾವಿನ ಪ್ರಮಾಣವನ್ನು ವಿಶ್ಲೇಷಿಸಿದ್ದು, ಅದರ ಪ್ರಕಾರ ಈಗ ನಿತ್ಯ ವರದಿಯಾಗುತ್ತಿರುವ ಸಾವಿನ ಸಂಖ್ಯೆಯ ಅನ್ವಯ ಜು.4ಕ್ಕೆ ದೇಶದಲ್ಲಿ ಕೊರೋನಾದ 3ನೇ ಅಲೆ ಆರಂಭವಾಗಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಈಗ ನಿತ್ಯ ಕೋವಿಡ್ ಕೇಸು ಮತ್ತು ಸಾವಿನ ಅನುಪಾತವು ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಕೋವಿಡ್ 2ನೇ ಅಲೆ ಆರಂಭವಾದಾಗ ಹೇಗಿತ್ತೋ ಹಾಗೇ ಇದೆ. ಜನರು ಮುನ್ನೆಚ್ಚರಿಕೆಯ ಕ್ರಮಗಳನ್ನು ಪಾಲಿಸದಿದ್ದರೆ ಇದು ವೇಗ ಪಡೆಯುತ್ತದೆ. ಆಗ 3ನೇ ಅಲೆ ವಿಕೋಪಕ್ಕೆ ಹೋಗುತ್ತದೆ ಎಂದು ಡಾ.ವಿಪಿನ್ ಎಚ್ಚರಿಸಿದ್ದಾರೆ.