ಲಾಕ್ ಡೌನ್ ಮುಂದುವರಿಸುತ್ತಾ ಹೋದರೆ ಯಾರು ಊಟ ಹಾಕ್ತಾರೆ? ಟ್ವಿಟರಿಗರ ಆಕ್ರೋಶ
ಸೋಮವಾರ, 18 ಮೇ 2020 (09:05 IST)
ಬೆಂಗಳೂರು: ದೇಶದಲ್ಲಿ ಸರ್ಕಾರಗಳ ಪರಿಸ್ಥಿತಿ ಹೇಗಾಗಿದೆ ಎಂದರೆ ಅತ್ತ ಲಾಕ್ ಡೌನ್ ಮುಂದುವರಿಸಿದರೂ ಕಷ್ಟ, ಮುಕ್ತಗೊಳಿಸಿದರೂ ಸಂಕಷ್ಟ ಎನ್ನುವಂತಾಗಿದೆ.
ಲಾಕ್ ಡೌನ್ 3 ಮುಗಿದು ಲಾಕ್ ಡೌನ್ 4 ಆರಂಭವಾಗಿರುವುದರ ಬಗ್ಗೆ ಟ್ವಿಟರಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಒಂದಾದ ಮೇಲೊಂದರಂತೆ ಲಾಕ್ ಡೌನ್ ಮಾಡುತ್ತಾ ಹೋದರೆ ನಮ್ಮ ಊಟಕ್ಕೆ ಏನು ಗತಿ? ಉದ್ಯೋಗಕ್ಕೆ ಯಾರು ಗ್ಯಾರಂಟಿ ಕೊಡ್ತಾರೆ? ಈ ರೀತಿ ನಾನಾ ಪ್ರಶ್ನೆಗಳನ್ನಿಟ್ಟು ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಹಲವಾರು ಮಂದಿ ಲಾಕ್ ಡೌನ್ ನಿಂದಾಗಿ ಉದ್ಯೋಗವನ್ನೂ ಕಳೆದುಕೊಂಡು, ಬೇರೆ ಉದ್ಯೋಗವನ್ನೂ ಹುಡುಕಲಾಗದೇ ಮಾನಸಿಕವಾಗಿ ಹತಾಶೆ ಸ್ಥಿತಿಗೆ ತಲುಪಿದ್ದಾರೆ. ಅತ್ತ ಲಾಕ್ ಡೌನ್ ಘೋಷಿಸಿರುವುದರಿಂದ ಕೊರೋನಾವೇನೂ ನಿಯಂತ್ರಣವಾಗುತ್ತಿಲ್ಲ. ಹೀಗೇ ಮುಂದುವರಿದರೆ ನಮ್ಮ ಉದ್ಯೋಗ, ಊಟಕ್ಕೆ ಯಾರು ಭದ್ರತೆ ಕೊಡುತ್ತಾರೆ ಎಂದು ಟ್ವಿಟರಿಗರು ಪ್ರಶ್ನಿಸಿದ್ದಾರೆ.
ಕೊರೋನಾ ಎಂಬ ಒಂದು ರೋಗ ನಿಯಂತ್ರಿಸಲು ಹೊರಟಿರುವ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ನಿರುದ್ಯೋಗ ಸಮಸ್ಯೆ ಇದಕ್ಕಿಂತ ದೊಡ್ಡದಾಗಿ ಕಾಡುವುದರಲ್ಲಿ ಅಚ್ಚರಿಯಿಲ್ಲ.