ಬೆಂಗಳೂರು: ಲಾಕ್ ಡೌನ್ ಪಾಲಿಸದಿದ್ದರೆ ಜೀವಕ್ಕೆ ಆಪತ್ತು. ಲಾಕ್ ಡೌನ್ ಪಾಲಿಸಿದರೆ ಜೀವನಕ್ಕೆ ಕುತ್ತು.. ಇದು ಉದ್ಯೋಗಸ್ಥರ ಸದ್ಯದ ಪರಿಸ್ಥಿತಿ.
ಕಂಪನಿ ಬಾಗಿಲು ಮುಚ್ಚಿ ಬರೋಬ್ಬರಿ ತಿಂಗಳಾಗುತ್ತಾ ಬಂದಿದೆ. ಸೋಮವಾರದಿಂದ ಐಟಿ-ಬಿಟಿ ಕಂಪನಿಗಳಿಗೆ ಶೇ. 50 ರಷ್ಟು ಹಾಜರಾತಿಯಲ್ಲಿ ಕಚೇರಿ ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಐಟಿ-ಬಿಟಿಯವರು ಈಗಾಗಲೇ ವರ್ಕ್ ಫ್ರಂ ಹೋಂ ಮಾಡುತ್ತಿದ್ದಾರೆ.
ಆದರೆ ಬೇರೆ ಖಾಸಗಿ ಕಂಪನಿ ಉದ್ಯೋಗಸ್ಥರಿಗೆ, ಮನೆಯಿಂದ ಕೆಲಸ ಮಾಡಲು ಸಾಧ‍್ಯವಾಗದ ನೌಕರರಿಗೆ ಭವಿಷ್ಯದ ಚಿಂತೆ ಕಾಡಿದೆ. ಇನ್ನೂ ಕೆಲವು ದಿನ ಕಂಪನಿ ಬಾಗಿಲು ಮುಚ್ಚಿದರೆ ಮುಂದೆ ತೆರೆದರೂ ಸಾಕಷ್ಟು ಕೆಲಸದ ಆರ್ಡರ್ ಸಿಗುತ್ತದೆಂಬ ನಂಬಿಕೆಯಿಲ್ಲ. ನಷ್ಟದ ಭೀತಿಯಿಂದ ಕೆಲವು ಸಣ್ಣ ಪುಟ್ಟ ಕಂಪನಿಗಳು ಈಗಾಗಲೇ ಬಾಗಿಲು ಮುಚ್ಚುವ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಲಾಕ್ ಡೌನ್ ತೆರೆದರೂ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಬಹುದು. ಆಗ ನೌಕರಿಯ ಗತಿಯೇನು? ಭವಿಷ್ಯದ ಗತಿಯೇನು ಎಂಬ ಆತಂಕ ಉದ್ಯೋಗಸ್ಥರನ್ನು ಕಾಡುತ್ತಿದೆ.
ಸರ್ಕಾರ ಈಗಾಗಲೇ ಕಂಪನಿ ಮುಚ್ಚುವುದು, ನೌಕರಿಯಿಂದ ವಜಾ ಮಾಡುವುದು ಮಾಡಬೇಡಿ ಎಂದು ಮನವಿ ಮಾಡುತ್ತಲೇ ಇದೆ. ಆದರೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಂಪನಿಗಳು ಸರ್ಕಾರದ ಮನವಿಗೆ ಓಗೊಡುತ್ತಾರಾ ಎನ್ನುವುದೇ ಪ್ರಶ್ನೆ.