ಧವನ್ ಸ್ಫೋಟಕ ಆಟ: ಲಂಕಾ ವಿರುದ್ಧ ಭಾರತಕ್ಕೆ 9 ವಿಕೆಟ್`ಗಳ ಜಯ

ಸೋಮವಾರ, 21 ಆಗಸ್ಟ್ 2017 (10:39 IST)
ಶಿಖರ್ ಧವನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ತಂಡ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 9 ವಿಕೆಟ್`ಗಳ ಭರ್ಜರಿ ಜಯ ದಾಖಲಿಸಿದೆ.

ಟಾಸ್ ಗೆದ್ದ ಭಾರತ ತಂಡ ಶ್ರಿಲಂಕಾಗೆ ಬ್ಯಾಟಿಂಗ್ ಆಹ್ವಾ ನೀಡಿತು. ಟೆಸ್ಟ್ ಸರಣಿ ಸೋಲಿನ ಹತಾಶೆಯಲ್ಲೆ ಬ್ಯಾಟಿಂಗ್ ಮಾಡಿದ ಲಂಕಾ ದಾಂಡಿಗರು ಭಾರತದ ಬೌಲಿಂಗ್ ದಾಳಿ ಎದುರು ಇನ್ನಿಲ್ಲದಂತೆ ತತ್ತರಿಸಿದರು. 43.2 ಓವರ್`ಗಳಲ್ಲಿ ಶ್ರೀಲಂಕಾ ತಂಡ 216 ರನ್`ಗಳಿಗೆ ಆಲೌಟ್ ಆಯಿತು. ಆರಂಭಿಕ ದಿಖ್ವಾಲೆ ಅರ್ಧ ಶತಕ ಬಿಟ್ಟರೆ ಬೇರಾವ ಆಟಗಾರನಿಂದಲೂ ಅತ್ಯುತ್ತಮ ಆಟ.ಬರಲಿಲ್ಲ.

ಸಾಧಾರಣ ಮೊತ್ತ ಬೆನ್ನತ್ತಿದ ಭಾರತ ತಂಡ ಶ್ರೀಲಂಕಾ ಬೌಲಿಂಗ್ ಪಡೆಯನ್ನ ಧೂಳೀಪಟ ಮಾಡಿತು. 4 ರನ್`ಗಳಿಗೆ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡರೂ ಬಳಿಕ ಒಂದಾದ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಜೋಡಿ ರನ್ ಹೊಳೆ ಹರಿಸಿದರು. ಕೇವಲ 90 ಎಸೆತಗಳನ್ನ ಎದುರಿಸಿದ ಶಿಖರ್ ಧವನ್ ಅಜೇಯ 132 ರನ್ ಸಿಡಿಸಿದರು. ಇದರಲ್ಲಿ ಸಾಥ್ ನೀಡಿದ ನಾಯಕ ಕೊಹ್ಲಿ ಸಹ 80 ರನ್ ಸಿಡಿಸಿದರು.
ಅಂತಿಮವಾಗಿ ಭಾರತ ತಂಡ ಕೇವಲ 28.5 ಓವರ್`ಗಳಲ್ಲಿ 220 ರನ್ ಗಳಿಸುವುದರೊಂದಿಗೆ ಗೆಲುವು ನಗೆ ಬೀರಿತು. 5 ಪಂದ್ಯಗಳ  ಏಕದಿನ  ಸರಣಿಯಲ್ಲಿ ಭಾರತ 1-0 ಮೊನ್ನಡೆ ಸಾಧಿಸಿದೆ. ಶ್ರೀಲಂಕಾ ತಂಡದಿಂದ ಯಾವುದೇ ಹೋರಾಟದ ಸೂಚನೆ ಇದುವರೆಗೆ ಸಿಕ್ಕಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ