ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಸರಣಿಯ ನಾಲ್ಕು ಪಂದ್ಯಗಳು ಮುಕ್ತಾಯವಾಗಿದ್ದು ಇದೀಗ ಕೊನೆಯ ಪಂದ್ಯಕ್ಕೆ ಎರಡೂ ತಂಡಗಳು ಅಣಿಯಾಗುತ್ತಿವೆ. ಐದನೇ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ಯಾರಾಗಲಿದ್ದಾರೆ ಎಂಬುದಕ್ಕೆ ಇಲ್ಲಿದೆ ಉತ್ತರ.
ನಾಲ್ಕನೇ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾಗ ರಿಷಭ್ ಪಂತ್ ಕಾಲು ಬೆರಳಿನ ಮುರಿತಕ್ಕೊಳಗಾಗಿದ್ದರು. ಅವರ ಗಾಯ ಗಂಭೀರವಾಗಿದ್ದರೂ ಮೊದಲ ಇನಿಂಗ್ಸ್ ನಲ್ಲಿ ಕುಂಟುತ್ತಲೇ ಬಂದು ಅರ್ಧಶತಕ ಸಿಡಿಸಿದ್ದರು. ಆದರೆ ಇದೀಗ ಐದನೇ ಪಂದ್ಯದಿಂದ ಅವರು ಹೊರಗುಳಿಯಲಿದ್ದಾರೆ. ಅವರ ಸ್ಥಾನಕ್ಕೆ ತಮಿಳುನಾಡು ಮೂಲದ ವಿಕೆಟ್ ಕೀಪರ್ ಜಗದೀಶನ್ ಸೇರ್ಪಡೆಯಾಗಿದೆ. ಸರಣಿಯ ಅಂತಿಮ ಪಂದ್ಯ ದಿ ಓವಲ್ ಮೈದಾನದಲ್ಲಿ ಜುಲೈ 31 ರಿಂದ ನಡೆಯಲಿದೆ.
ಹಾಗಿದ್ದರೆ ಐದನೇ ಪಂದ್ಯದಲ್ಲಿ ಭಾರತ ತಂಡದ ಕೀಪರ್ ಯಾರು? ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಕಳೆದ ಎರಡು ಪಂದ್ಯಗಳಲ್ಲಿ ಧ್ರುವ ಜ್ಯುರೆಲ್ ತಂಡದ ಕೀಪರ್ ಆಗಿ ಕಾರ್ಯನಿರ್ವಹಿಸಿದ್ದರು. ಅವರೇ ಐದನೇ ಪಂದ್ಯದಲ್ಲಿ ಕೀಪರ್ ಆಗಿ ಕಣಕ್ಕಿಳಿಯುವುದು ಖಚಿತವಾಗಿದೆ.
ರಿಷಭ್ ಪಂತ್ ಅನುಪಸ್ಥಿತಿ ಭಾರತಕ್ಕೆ ನಿರ್ಣಾಯಕ ಪಂದ್ಯದಲ್ಲಿ ಬಹಳ ಕಾಡಲಿದೆ. ಯಾಕೆಂದರೆ ಕೆಎಲ್ ರಾಹುಲ್ ಬಿಟ್ಟರೆ ಈ ಸರಣಿಯಲ್ಲಿ ನಿಯಮಿತವಾಗಿ ಉತ್ತಮ ಪ್ರದರ್ಶನ ನೀಡಿದ್ದ ರಿಷಭ್ ಪಂತ್. ಅವರ ಸ್ಥಾನವನ್ನು ಈಗ ಧ್ರುವ ಜ್ಯುರೆಲ್ ತುಂಬಬೇಕಿದೆ.