ಮಿಂಚಿದ ಮುಸ್ತಫಿಜುರ್ 6 ವಿಕೆಟ್: ಭಾರತಕ್ಕೆ ಬಾಂಗ್ಲಾ ವಿರುದ್ಧ 2-0 ಸರಣಿ ಸೋಲು

ಸೋಮವಾರ, 22 ಜೂನ್ 2015 (13:39 IST)
ಭಾರತ ಬಾಂಗ್ಲಾದೇಶದ ವಿರುದ್ಧ ಎರಡನೇ ಏಕದಿನದಲ್ಲಿ 6 ವಿಕೆಟ್‌ಗಳಿಂದ ಸೋಲುವ ಮೂಲಕ ಬಾಂಗ್ಲಾದೇಶ ಮೊಟ್ಟ ಮೊದಲ ಬಾರಿಗೆ ಭಾರತದ ವಿರುದ್ಧ ಏಕದಿನ ಸರಣಿಯನ್ನು 2-0ಯಿಂದ  ಗೆದ್ದು ಇತಿಹಾಸ ನಿರ್ಮಿಸಿದೆ. 
 
ಬಾಂಗ್ಲಾದೇಶದ ಯುವ ವೇಗಿ ಮುಸ್ತಫಿಜುರ್ ರೆಹಮಾನ್  43 ರನ್ ನೀಡಿ 6 ವಿಕೆಟ್ ಕಬಳಿಸುವ ಮೂಲಕ ಮತ್ತೊಮ್ಮೆ ಟೀಂ ಇಂಡಿಯಾ ವಿರುದ್ಧ ತಮ್ಮ ಕೈಚಳಕ ತೋರಿಸಿದರು. ಮೊದಲ ಏಕದಿನದಲ್ಲಿ ಐದು ವಿಕೆಟ್ ಕಬಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದ ಮುಸ್ತಫಿಜುರ್ ಎರಡನೇ ಏಕದಿನದಲ್ಲೂ ಮಿಂಚಿನ ಬೌಲಿಂಗ್ ದಾಳಿಮಾಡಿದರು. 
 
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತದ ಪರ ಓಪನರ್ ಶಿಖರ್ ಧವನ್ 53 ಉಪಯುಕ್ತ ರನ್ ಬಾರಿಸಿದರು. ಮಹೇಂದ್ರ ಸಿಂಗ್ ಧೋನಿ ಶ್(47) ತಮ್ಮ ಇನ್ನಿಂಗ್ಸ್‌ನಲ್ಲಿ ಫಾರಂ ಕಳೆದುಕೊಂಡವರಂತೆ  ನಿಧಾನಗತಿಯಲ್ಲಿ ಆಡಿದರು. ಧವನ್ ಮತ್ತು ಕೊಹ್ಲಿ  ಮಾತ್ರ ಎರಡನೇ ವಿಕೆಟ್‌ಗೆ 74 ರನ್ ಸೇರಿಸಿದರು.  ಮಳೆಯಿಂದ ಪಂದ್ಯಕ್ಕೆ ಅಡ್ಡಿಯಾಗಿ ಆತಿಥೇಯರಿಗೆ 47 ಓವರುಗಳಲ್ಲಿ 200 ರನ್ ಗುರಿಯನ್ನು ನಿಗದಿ ಮಾಡಲಾಯಿತು.  ಬಾಂಗ್ಲಾದೇಶಿ ಆಟಗಾರರು ಯಾವುದೇ ಅಂಜಿಕೆಯಿಲ್ಲದೇ ಆಡಿ 9 ಓವರುಗಳು ಬಾಕಿಯಿರುವಂತೆಯೇ ಸ್ಕೋರಿನ ಗಡಿಯನ್ನು ದಾಟಿದರು. 

ಬಾಂಗ್ಲಾದೇಶ ಇತ್ತೀಚೆಗೆ ವಿಶ್ವ ಕ್ರಿಕೆಟ್‌ನಲ್ಲಿ ಉತ್ತಮವಾಗಿ ಆಡುತ್ತಿದ್ದು ವಿಶ್ವಕಪ್ ಕ್ವಾರ್ಟರ್ ಫೈನಲ್ ಮುಟ್ಟಿತ್ತು. ಈ ಸರಣಿ ಜಯದಿಂದ ಖಂಡಿತವಾಗಿ ಅದರ ಖ್ಯಾತಿ ಹೆಚ್ಚಿದ್ದು, ಅವರನ್ನು ಕ್ರಿಕೆಟ್ ಶಿಶು ಎಂದು ಇನ್ನೆಂದೂ ಪರಿಗಣಿಸಲು ಸಾಧ್ಯವಾಗದು.
 
ದಾಸ್(36), ಮುಸ್ಫಿಕರ್ ರಹೀಮ್(31) ಮತ್ತು ಅನುಭವಿ ಶಕೀಬ್ ಅಲ್ ಹಸನ್ (51 ಅಜೇಯ) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಟೀಂ ಇಂಡಿಯಾದ ಕಮ್ ಬ್ಯಾಕ್ ಯತ್ನ ವಿಫಲಗೊಳಿಸಿದರು. ಇದಕ್ಕೆ ಮುನ್ನ ಬ್ಯಾಟಿಂಗ್ ಆಡಿದ್ದ ಭಾರತ ತಂಡದಲ್ಲಿ ಐವರು ಬ್ಯಾಟ್ಸ್‌ಮನ್‌ಗಳು ಎರಡಂಕಿ ಮುಟ್ಟಲು ವಿಫಲರಾಗಿದ್ದು ವಿಪರ್ಯಾಸ. ರೋಹಿತ್ ಶರ್ಮಾ ಎರಡನೇ ಎಸೆತಕ್ಕೆ  ಮುಸ್ತಫಿಜುರ್‌ಗೆ ಔಟಾದರು.

ಮುಸ್ತಫಿಜುರ್ ರೋಹಿತ್ ಶರ್ಮಾ, ಧೋನಿ,  ಸುರೇಶ್ ರೈನಾ, ರವೀಂದ್ರ ಜಡೇಡಾ, ಅಕ್ಸರ್ ಪಟೇಲ್, ಅಶ್ವಿನ್ ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಪುರಸ್ಕೃತರಾದರು. ಭಾರತದ ಪರ ಧೋನಿ ಮತ್ತು ರೈನಾ ನಿಧಾನಗತಿಯಲ್ಲಿ ರನ್ ಸ್ಕೋರ್ ಮಾಡಿದ್ದು ಕೂಡ ಭಾರತಕ್ಕೆ ಮುಳುವಾಯಿತು. ಧೋನಿ 75 ಎಸೆತಗಳಲ್ಲಿ 47 ಮತ್ತು ರೈನಾ 55 ಎಸೆತಗಳಲ್ಲಿ 34 ರನ್ ಹೊಡೆದಿದ್ದರು. 

ವೆಬ್ದುನಿಯಾವನ್ನು ಓದಿ