ಸ್ಟೀವ್ ಸ್ಮಿತ್‌ಗೆ ಒಂದು ರನ್‌ನಿಂದ ದ್ವಿಶತಕ ಮಿಸ್: ವಿಂಡೀಸ್ ಕುಸಿತ

ಶನಿವಾರ, 13 ಜೂನ್ 2015 (18:13 IST)
ಆಸ್ಟ್ರೇಲಿಯಾ ಮತ್ತು  ವೆಸ್ಟ್ ಇಂಡೀಸ್ ನಡುವೆ ನಡೆದ ಎರಡನೇ ಮತ್ತು ಅಂತಿಮ  ಟೆಸ್ಟ್ ಪಂದ್ಯದ ಎರಡನೇ ದಿನವಾದ ಶನಿವಾರ ಆಸ್ಟ್ರೇಲಿಯಾದ  ಮೊದಲ ಇನ್ನಿಂಗ್ಸ್ ಮೊತ್ತವಾದ 399ಕ್ಕೆ ಉತ್ತರವಾಗಿ ವೆಸ್ಟ್ ಇಂಡೀಸ್ 143ಕ್ಕೆ 8 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿದೆ.  ಸ್ಟೀವ್ ಸ್ಮಿತ್ ಕೇವಲ ಒಂದು ರನ್‌ನಿಂದ ದ್ವಿಶತಕವನ್ನು ಮಿಸ್ ಮಾಡಿಕೊಂಡಿದ್ದು ಗಮನ ಸೆಳೆಯಿತು. ಎರಡನೇ ದಿನದ ಉತ್ತರಾರ್ಧದಲ್ಲಿ ನಾಥನ್ ಲಯನ್ ಆಫ್ ಸ್ಪಿನ್ ದಾಳಿಯಲ್ಲಿ 3 ವಿಕೆಟ್ ಲಭಿಸಿತು.
 
ವೇಗಿ ಜೋಷ್ ಹ್ಯಾಜಲ್ ವುಡ್ ಕೂಡ ಜರ್ಮೈನ್ ಬ್ಲಾಕ್‌‍ವುಡ್ ವಿಕೆಟ್ ಸೇರಿದಂತೆ  ಮೂರು ವಿಕೆಟ್ ಕಬಳಿಸಿದರು. ದಿನದ ಕೊನೆಯ ಎರಡು ಓವರುಗಳಲ್ಲಿ ಎರಡು ವಿಕೆಟ್‌ಗಳಿಂದ ವೆಸ್ಟ್ ಇಂಡೀಸ್ ಹತಾಶ ಸ್ಥಿತಿಗೆ ತಲುಪಿದ್ದು, ಫಾಲೋ ಆನ್ ತಪ್ಪಿಸಿಕೊಳ್ಳಲು ಇನ್ನೂ 56 ರನ್ ಅಗತ್ಯವಿದೆ. 
 
ತಮ್ಮ ತಂಡದ ಸ್ಕೋರಿಗೆ ಭದ್ರ ಅಡಿಪಾಯ ಹಾಕಿದ್ದ ಉಪನಾಯಕ ಸ್ಮಿತ್ ಟೆಸ್ಟ್ ಪಂದ್ಯದಲ್ಲಿ 199 ರನ್‌ಗೆ ಔಟಾದ ಮೂರನೇ ಆಸೀಸ್ ಆಟಗಾರರೆನಿಸಿದರು ಮತ್ತು ಒಟ್ಟಾರೆಯಾಗಿ 138 ವರ್ಷಗಳ ಸಾಂಪ್ರದಾಯಿಕ ಮಾದರಿ ಕ್ರಿಕೆಟ್ ಇತಿಹಾಸದಲ್ಲಿ 8ನೇ ಆಟಗಾರರೆನಿಸಿದರು. 25 ಓವರುಗಳಲ್ಲಿ 47 ರನ್ ನೀಡಿ ಅಮೋಘ 6 ವಿಕೆಟ್ ಕಬಳಿಸಿದ ಜೆರೋಮ್ ಟೇಲರ್ ಸ್ಮಿತ್ ಅವರನ್ನು ಎಲ್‌ಬಿಡಬ್ಲ್ಯುಗೆ ಔಟ್ ಮಾಡಿದಾಗ ದ್ವಿಶತಕ ಬಾರಿಸುವ ಅವರ ಕನಸು ಕಮರಿತು.  ತಾವು ಮೊದಲ ದರ್ಜೆ ಪಂದ್ಯದಲ್ಲಿ ದ್ವಿಶತಕ ಬಾರಿಸಿಲ್ಲವಾದ್ದರಿಂದ ತಮಗೆ ನಿರಾಶೆ ಮೂಡಿಸಿದೆ ಎಂದು ಸ್ಮಿತ್ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ