ವೆಸ್ಟ್ ಇಂಡೀಸ್ ಆಟಗಾರ ರೋಸ್ಟನ್ ಚೇಸ್ ಅವರ ದಿಟ್ಟ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ ಮರುಹೋರಾಟ ನೀಡಿದ್ದರಿಂದ ಭಾರತ ವಿಂಡೀಸ್ ವಿರುದ್ಧ ಎರಡನೇ ಟೆಸ್ಟ್ ಅಂತಿಮ ದಿನದಂದು ಹತಾಶೆಯ ಡ್ರಾಗೆ ತೃಪ್ತಿಪಟ್ಟಿದೆ. ಕೇವಲ ತಮ್ಮ ಎರಡನೇ ಟೆಸ್ಟ್ ಆಡುತ್ತಿರುವ ಚೇಸ್ 269 ಎಸೆತಗಳಲ್ಲಿ ಸದೃಢ 137 ರನ್ ಸಿಡಿಸಿ ತಮ್ಮ ಸಹಆಟಗಾರರ ಜತೆ ಮೂರು ಪಂದ್ಯ ಉಳಿಸುವ ಜತೆಯಾಟಗಳನ್ನು ಆಡಿದರು.
24 ವರ್ಷದ ಬ್ಯಾಟ್ಸ್‌ಮನ್ ಚೇಸ್ ಶತಕ ಸಿಡಿಸಿ ಅದೇ ಪಂದ್ಯದಲ್ಲಿ ಐದು ವಿಕೆಟ್ ಕಬಳಿಸಿದ ನಾಲ್ಕನೇ ವೆಸ್ಟ್ ಇಂಡೀಸ್ ಆಟಗಾರ ಎಂಬ ಶ್ರೇಯಕ್ಕೆ ಪಾತ್ರರಾದರು.
ಹಿಂದೆ ಈ ಸಾಧನೆ ಮಾಡಿದ ಸೋಬರ್ಸ್, ಕಾಲಿ ಸ್ಮಿತ್ ಮತ್ತು ಡೆನ್ನಿಸ್ ಆಟ್‌ಕಿನ್‌ಸನ್ ಪಟ್ಟಿಯಲ್ಲಿ ಚೇಸ್ ಸೇರಿದರು.
ಒಂದು ಹಂತದಲ್ಲಿ 48ಕ್ಕೆ 4 ವಿಕೆಟ್ ಕಳೆದುಕೊಂಡು ವೆಸ್ಟ್ ಇಂಡೀಸ್ ಶೋಚನೀಯ ಸ್ಥಿತಿಯಲ್ಲಿತ್ತು. ಆದರೆ ಐದನೇ ದಿನ ಇಡೀ ದಿನ ಆಡಿ 2 ವಿಕೆಟ್‌ಗಳನ್ನು ಮಾತ್ರ ಒಪ್ಪಿಸಿದ ವಿಂಡೀಸ್ 2-0 ಮುನ್ನಡೆ ಸಾಧಿಸುವ ಭಾರತದ ಮಹತ್ವಾಕಾಂಕ್ಷೆಗೆ ಪೆಟ್ಟು ಬಿತ್ತು.
ಐದನೇ ದಿನ ಶುಭ್ರ ಆಕಾಶದ ನಡುವೆ, ವಿಕೆಟ್ ಭಾರತದ ಬೌಲರುಗಳಿಗೆ ಯಾವ ರೀತಿಯಲ್ಲೂ ನೆರವಾಗಲಿಲ್ಲ.
ಚೇಸ್ ಶೇನ್ ಡೌರಿಕ್(74) ಜತೆ144 ರನ್ ಜತೆಯಾಟವಾಡಿದರು. ಡೌರಿಕ್ ಔಟಾದ ಬಳಿಕ ನಾಯಕ ಹೋಲ್ಡರ್ ಅಜೇಯ 64 ರನ್ ಸಿಡಿಸಿ ಚೇಸ್ ಜತೆ 103 ರನ್ ಜತೆಯಾಟವಾಡಿದರು. ವೆಸ್ಟ್ ಇಂಡೀಸ್ ದಿನದಾಟ ಮುಗಿದಾಗ 388 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡಿತ್ತು. ಚೇಸ್ ಭರ್ಜರಿ 137 ರನ್ ಗಳಿಸಿ ಇನ್ನಿಂಗ್ಸ್ ಸೋಲಿನಿಂದ ವಿಂಡೀಸ್ ತಂಡವನ್ನು ಪಾರು ಮಾಡಿದರು. ಭಾರತ ತಂಡದ ಬೌಲರುಗಳು ಚೇಸ್ ಮತ್ತು ಹೋಲ್ಡರ್ ಜೋಡಿಯನ್ನು ಔಟ್ ಮಾಡಲಾಗದೇ ಹತಾಶೆಯಿಂದ ಕೈಚೆಲ್ಲಿದರು.