ನವದೆಹಲಿ: ಪಹಲ್ಗಾಮ್ ದಾಳಿ ಬಳಿಕ ಭಾರತ ಸರ್ಕಾರ ಪಾಕಿಸ್ತಾನದ ಕ್ರಿಕೆಟಿಗರ ಯೂ ಟ್ಯೂಬ್ ಚಾನೆಲ್ ಗಳು, ಸೋಷಿಯಲ್ ಮೀಡಿಯಾ ಖಾತೆಯನ್ನು ಬ್ಯಾನ್ ಮಾಡಿತ್ತು. ಆದರೆ ಇತ್ತೀಚೆಗೆ ಮತ್ತೆ ನಿಷೇಧ ಹಿಂತೆಗೆಯಲಾಗಿತ್ತು. ಆದರೆ ಈಗ ಮತ್ತೆ ಬ್ಲಾಕ್ ಮಾಡಲಾಗಿದೆ.
ಪಹಲ್ಗಾಮ್ ನಲ್ಲಿ ಪಾಕ್ ಪ್ರೇರಿತ ಉಗ್ರರು ದಾಳಿ ನಡೆಸಿ ಅಮಾಯಕರ ಮಾರಣಹೋಮ ನಡೆಸಿದ ಬೆನ್ನಲ್ಲೇ ಭಾರತ ಸರ್ಕಾರ ರಾಜತಾಂತ್ರಿಕವಾಗಿ ಪಾಕಿಸ್ತಾನಕ್ಕೆ ಪೆಟ್ಟುಕೊಡಲು ಮುಂದಾಗಿತ್ತು. ಅದರ ಅಂಗವಾಗಿ ಪಾಕಿಸ್ತಾನ ಕ್ರಿಕೆಟಿಗರಾದ ಶಾಹಿದ್ ಅಫ್ರಿದಿ, ಶೊಯೇಬ್ ಅಖ್ತರ್ ಮುಂತಾದವರ ಯೂ ಟ್ಯೂಬ್ ಚಾನೆಲ್ ಗಳು ಭಾರತದಲ್ಲಿ ಬ್ಲಾಕ್ ಆಗಿದ್ದವು.
ಆದರೆ ನಿನ್ನೆ ಈ ಕ್ರಿಕೆಟಿಗರ ಸೋಷಿಯಲ್ ಮೀಡಿಯಾ ಖಾತೆಗಳು ಹ್ಯಾಕ್ ಆಗಿದ್ದರೂ ಯೂ ಟ್ಯೂಬ್ ಚಾನೆಲ್ ಗಳು ವೀಕ್ಷಣೆಗೆ ಲಭ್ಯವಾಗಿತ್ತು. ಆದರೆ ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಇಷ್ಟು ಬೇಗ ಪಹಲ್ಗಾಮ್ ದಾಳಿಯನ್ನು ನಾವು ಮರೆತವಾ? ನಿಷೇಧ ಯಾಕೆ ಹಿಂತೆಗೆದ್ರಿ ಎಂದು ಹಲವರು ಪ್ರಶ್ನೆ ಮಾಡಿದ್ದರು.
ಇದರ ಬೆನ್ನಲ್ಲೇ ಇಂದು ಮತ್ತೆ ಈ ಕ್ರಿಕೆಟಿಗರ ಯೂ ಟ್ಯೂಬ್ ಚಾನೆಲ್ ಗಳು ಬ್ಲಾಕ್ ಆಗಿವೆ. ಸೋಷಿಯಲ್ ಮೀಡಿಯಾ ಖಾತೆಗಳೂ ಬ್ಲಾಕ್ ಆಗಿಯೇ ಇವೆ. ಈ ಮೂಲಕ ಪಾಕ್ ಕ್ರಿಕೆಟಿಗರ ಖಾತೆಗಳು ಒಮ್ಮೆ ಆನ್ ಇನ್ನೊಮ್ಮೆ ಆಫ್ ಆದಂತಾಗಿದೆ.