ಕಿವೀಸ್ ಕಿವಿ ಹಿಂಡಿ 'ವಿಜಯ ದಶಮಿ' ಆಚರಿಸಿದ ಕೊಹ್ಲಿ ಪಡೆ

ಮಂಗಳವಾರ, 11 ಅಕ್ಟೋಬರ್ 2016 (17:32 IST)
ನ್ಯೂಜಿಲೆಂಡ್ ವಿರುದ್ಧ ಅಂತಿಮ ಟೆಸ್ಟ್‌ನ್ನು ಸಹ ಗೆಲ್ಲುವ ಮೂಲಕ ಭಾರತ ಕ್ರಿಕೆಟ್ ತಂಡ ವಿಜಯ ದಶಮಿಯನ್ನು ಅದ್ದೂರಿಯಾಗಿ ಆಚರಿಸಿದೆ. ಕಳೆದೆರಡು ಟೆಸ್ಟ್‌ಗಳನ್ನು ಗೆದ್ದಿದ್ದ ಭಾರತ ಮೂರನೆಯ ಟೆಸ್ಟ್‌ನ್ನು ಸಹ ನಿರಾಯಾಸವಾಗಿ ಗೆದ್ದುಕೊಂಡು ನಾಲ್ಕನೇ ದಿನಕ್ಕೆ ಆಟಕ್ಕೆ ಅಂತ್ಯ ಹಾಡಿತು. 
ಸ್ಟಾರ್ ಸ್ಪಿನ್ನರ್ ರವೀಂದ್ರನ್ ಅಶ್ವಿನ್ ಅವರ ಜೀವನಶ್ರೇಷ್ಠ ಸಾಧನೆಯ ನೆರವಿನೊಂದಿಗೆ ಭಾರತ ಮೂರನೇ ಮತ್ತು ಅಂತಿಮ ಟೆಸ್ಟ್ ಪಂದ್ಯವನ್ನು 321 ರನ್ ಗಳ ಬಹುದೊಡ್ಡ ಅಂತರದೊಂದಿಗೆ ಗೆದ್ದುಕೊಂಡಿತು. 
 
ಪ್ರಥಮ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಕಿತ್ತು ಸಂಭ್ರಮಿಸಿದ್ದ ಅಶ್ವಿನ್ ಎರಡನೆಯ ಇನ್ನಿಂಗ್ಸ್ ನಲ್ಲಿ ಕೂಡ ಎದುರಾಳಿಗಳ ಕಿವಿ ಹಿಂಡಿ ಬರೊಬ್ಬರಿ 7  ಬಲಿ ಪಡೆದರು. ಅಶ್ವಿನ್ ಅವರ ಮಾರಕ ದಾಳಿಗೆ ನಲುಗಿದ ನ್ಯೂಜಿಲೆಂಡ್  ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಹೀನಾಯ ಸೋಲನ್ನು ಕಂಡಿತು. ಈ ಮೂಲಕ ಭಾರತ ಕ್ಲೀನ್ ಸ್ವೀಪ್‌ನೊಂದಿಗೆ ಸರಣಿಯನ್ನು ಜಯಿಸಿತು.
 
ಎರಡನೆಯ ಇನ್ನಿಂಗ್ಸ್‌ನಲ್ಲಿ ಭಾರತ 3 ವಿಕೆಟ್ ನಷ್ಟಕ್ಕೆ 216 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು ಮತ್ತು ಎದುರಾಳಿ ತಂಡಕ್ಕೆ 475 ರನ್ ರನ್‌ಗಳ ಬೃಹತ್ ಗುರಿಯನ್ನು ಒಡ್ಡಿತ್ತು. ಭಾರತದ ಪರ ಅಬ್ಬರಿಸಿದ ಪೂಜಾರ ಅಜೇಯ 101(148) ಮತ್ತು ಮೊದಲ ಪಂದ್ಯದಲ್ಲಿ ಗಾಯಗೊಂಡು ನಿವೃತ್ತಿಯಾಗಿದ್ದ ಗಂಭೀರ್ 50 ರನ್‌ಗಳ ಅತ್ಯುತ್ತಮ ಕಾಣಿಕೆಯನ್ನು ನೀಡಿದ್ದರು. 
 
ಈ ಬೃಹತ್ ಮೊತ್ತವನ್ನು ಮುಂದಿಟ್ಟುಕೊಂಡು ಎರಡನೆಯ ಇನ್ನಿಂಗ್ಸ್ ಆರಂಭಿಸಿದ ಕಿವೀಸ್ ಅಶ್ವಿನ್ ಅವರ ಮಾಂತ್ರಿಕ ಬೌಲಿಂಗ್ ತತ್ತರಿಸಿ ಯಾವುದೇ ಪ್ರತಿರೋಧ ಒಡ್ಡದೆ ಕೇವಲ 150 ರನ್‌ಗಳಿಸಿ ಪಂದ್ಯವನ್ನು ಕೈ ಚೆಲ್ಲಿತು. 
 
ಎದುರಾಳಿ ತಂಡದ ಪರ ಯಾರು ಕೂಡ ಭಾರತದ ಬೌಲಿಂಗ್‌ನ್ನು ಎದುರಿಸುವ ತಾಕತ್ ಪ್ರದರ್ಶಿಸಲಿಲ್ಲ. ಮಾರ್ಕ್ ಗುಪ್ಟಿಲ್ 29, ಕೇನ್ ವಿಲಿಯಮ್ಸ್ 27, ರಾಸ್ ಟೇಲರ್ 32, ಬ್ರಾಡ್ಲಿ  ಬಿಟ್ಟರೆ ಯಾರು ಕೂಡ 20ರ ಗಡಿಯನ್ನು ಕೂಡ ದಾಟಲಿಲ್ಲ .
 
ಭಾರತದ ಪರ ಅಶ್ವಿನ್ 7, ರವಿಂದ್ರ ಜಡೇಜಾ 3, ಉಮೇಶ್ ಯಾದವ್ 1 ವಿಕೆಟ್ ಪಡೆದರು. ಮೊದಲ ಇನಿಂಗ್ಸ್‌ನಲ್ಲಿ ಭಾರತ 5 ವಿಕೆಟ್ ನಷ್ಟಕ್ಕೆ 557 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದ್ದರೆ ನ್ಯೂಜಿಲೆಂಡ್ 299 ರನ್‍ಗಳಿಗ ಅಲೌಟ್ ಆಗಿತ್ತು.
 
ಕಾನ್ಪುರದಲ್ಲಿ ನಡೆದ ಮೊದಲ ಪಂದ್ಯವನ್ನು 197 ರನ್‌ಗಳ ಅಂತರದಿಂದ ಗೆದ್ದಿದ್ದ ಭಾರತ ಕೋಲ್ಕತ್ತಾದಲ್ಲಿ ನಡೆದ ಎರಡನೆಯ ಪಂದ್ಯವನ್ನು 178 ರನ್‌ಗಳಿಂದ ಗೆಲ್ಲುವ ಮೂಲಕ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಪಾಕ್‌ನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿತ್ತು.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ