ಒಂದೇ ಇನಿಂಗ್ಸ್ ನಲ್ಲಿ 10 ವಿಕೆಟ್ ಸಾಧನೆ ಮಾಡಿದ ಕಿವೀಸ್ ಬೌಲರ್ ಅಜಾಜ್ ಪಟೇಲ್
ಶನಿವಾರ, 4 ಡಿಸೆಂಬರ್ 2021 (14:29 IST)
ಮುಂಬೈ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇತಿಹಾಸವೊಂದು ದಾಖಲಾಗಿದೆ. ಕಿವೀಸ್ ಬೌಲರ್ ಅಜಾಜ್ ಪಟೇಲ್ ಭಾರತದ ಎಲ್ಲಾ 10 ಬ್ಯಾಟ್ಸ್ ಮನ್ ಗಳನ್ನು ಔಟ್ ಮಾಡುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಇದಕ್ಕೂ ಮೊದಲು ಜಿಮ್ ಲೇಕರ್ ಮತ್ತು ಭಾರತದ ಅನಿಲ್ ಕುಂಬ್ಳೆ ಒಂದೇ ಇನಿಂಗ್ಸ್ ನ ಎಲ್ಲಾ 10 ವಿಕೆಟ್ ಪಡೆದು ದಾಖಲೆ ಮಾಡಿದ್ದರು. ಇದೀಗ ಅಜಾಜ್ ಪಟೇಲ್ ಈ ದಾಖಲೆ ಮಾಡಿದ ಮೂರನೇ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ನಿನ್ನೆ ನಾಲ್ಕು ವಿಕೆಟ್ ಕಬಳಿಸಿದ್ದ ಪಟೇಲ್ ಇಂದು ಉಳಿದ ಆರೂ ವಿಕೆಟ್ ಗಳನ್ನು ತಮ್ಮ ತೆಕ್ಕೆಗೆ ಹಾಕಿಕೊಂಡರು. ಭಾರತ ಮೂಲದವರೇ ಆದ ಅಜಾಜ್ ಪಟೇಲ್ ಮೊದಲ ಟೆಸ್ಟ್ ನಲ್ಲಿ ನ್ಯೂಜಿಲೆಂಡ್ ತಂಡ ಟೆಸ್ಟ್ ಡ್ರಾ ಮಾಡಿಕೊಳ್ಳುವಲ್ಲಿ ಪ್ರಧಾನ ಪಾತ್ರವಹಿಸಿದ್ದರು. ಈ ಪಂದ್ಯದಲ್ಲಿ ಬೌಲಿಂಗ್ ಮೂಲಕ ಕಮಾಲ್ ಮಾಡಿದ್ದಾರೆ. ಅಜಾಜ್ ದಾಖಲೆಗೆ ಇಡೀ ಕ್ರಿಕೆಟ್ ಜಗತ್ತು ಸಲಾಂ ಎಂದಿದೆ.
ಇನ್ನು, ಭಾರತ ಮೊದಲ ಇನಿಂಗ್ಸ್ ನಲ್ಲಿ 325 ರನ್ ಗಳಿಗೆ ಆಲೌಟ್ ಆಗಿದೆ. ಇದಕ್ಕೆ ಉತ್ತರವಾಗಿ ನ್ಯೂಜಿಲೆಂಡ್ 31 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಭಾರತದ ಪರ ವೇಗಿ ಮೊಹಮ್ಮದ್ ಸಿರಾಜ್ 3, ರವಿಚಂದ್ರನ್ ಅಶ್ವಿನ್, ಅಕ್ಸರ್ ಪಟೇಲ್ ತಲಾ 1 ವಿಕೆಟ್ ಕಬಳಿಸಿದ್ದಾರೆ.