ಹೈದರಾಬಾದ್: ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯಾ ರೆಹಾನೆ ಆಡುವುದು ನೋಡಿದರೆ ಇದು ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವೋ, ನೆಟ್ ಪ್ರಾಕ್ಟೀಸೋ ಎನ್ನುವ ಅನುಮಾನ ಬರುತ್ತಿದ್ದುದಂತೂ ನಿಜ. ಅಷ್ಟೂ ಲೀಲಾಜಾಲವಾಗಿ ಬ್ಯಾಟ್ ಬೀಸುತ್ತಿದ್ದರು ಇಬ್ಬರೂ.
ಇವರಿಬ್ಬರ ಆಟ ಮೆಲುವಾದ ಸಂಗೀತದಂತಿತ್ತು. ಆ ಸಂಗೀತ ಕಿವಿಗೆ ಅಪ್ಪಳಿಸುವಂತಿಲ್ಲದಿದ್ದರೂ ಹೃದಯಕ್ಕೆ ಖುಷಿ ಕೊಡುವ ಹಾಗೆ ಮಧುರವಾಗಿತ್ತು. ಈ ಸೊಗಸಾದ ಹಾಡಿಗೆ ಕೊಹ್ಲಿ ಧ್ವನಿಯಾದರೆ, ರೆಹಾನೆ ಮೆಲುವಾದ ಹಿನ್ನಲೆ ವಾದ್ಯವಾಗಿದ್ದರು. ನೆರೆದಿದ್ದ ಪ್ರೇಕ್ಷಕರು ಈ ಅದ್ಭುತ ಹಾಡಿನ ಮೋಡಿಗೆ ಕುಣಿಯುತ್ತಿದ್ದರು!
ರೆಹಾನೆ ಆದರೂ ಕೆಲವೊಂದು ಕಡೆ ಕ್ಯಾಚಿಂಗ್ ಅವಕಾಶ ಕೊಟ್ಟಿದ್ದರು. ಆದರೆ ಕೊಹ್ಲಿ ಮಾತ್ರ ಮುಖದಲ್ಲಿ ಯಾವುದೇ ಕಷ್ಟವನ್ನೂ ತೋರಿಸದೆ, ಆರಾಮವಾಗಿ ಬೌಂಡರಿ ಚಚ್ಚುತ್ತಿದ್ದರು. ಸರಿಯಾದ ಯೋಜಿತ ಬೌಲಿಂಗ್ ದಾಳಿಯಿದ್ದರೇ ಕೊಹ್ಲಿಯನ್ನು ನಿಯಂತ್ರಿಸುವುದು ಕಷ್ಟ. ಅಂತಹದ್ದರಲ್ಲಿ ಗೊತ್ತು ಗುರಿಯಿಲ್ಲದ ಬೌಲಿಂಗ್, ಸರಿಯಾಗಿ ಫೀಲ್ಡ್ ಸೆಟ್ ಮಾಡದೇ ಆಡಿದರೆ ಕೊಹ್ಲಿಯಿಂದ ಎಂತಹ ಉತ್ತರ ಪಡೆಯಬೇಕಾದೀತೆಂದು ಅವರ 191 ರನ್ ಗಳ ಇನಿಂಗ್ಸ್ ಹೇಳುತ್ತದೆ.
ಏನೇ ಆದರೂ, ಮೈದಾನದಲ್ಲಿ ಸೇರಿದ್ದ ಸಾವಿರಾರು ಸಂಖ್ಯೆಯ ವೀಕ್ಷಕರಿಗೆ ಅದರಲ್ಲೂ ಶಾಲಾ ಮಕ್ಕಳಿಗೆ ಭರಪೂರ ಭೋಜನ ಕೊಟ್ಟರು ಕೊಹ್ಲಿ. ಬಾಂಗ್ಲಾ ಬೌಲರ್ ಗಳು ಒಂದೆರಡು ಬಾರಿ ಟರ್ನ್ ಪಡೆದಿದ್ದು ಬಿಟ್ಟರೆ ಬೌಲಿಂಗ್ ನಲ್ಲಿ ನಿನ್ನೆಯಷ್ಟೂ ಮೊನಚು ಕಂಡುಬರಲಿಲ್ಲ. ಭೋಜನ ವಿರಾಮಕ್ಕೂ ಕೆಲವು ಕ್ಷಣಗಳ ಮೊದಲು ಮಹದಿ ಹಸನ್ ಬೌಲಿಂಗ್ ನಲ್ಲಿ ಕೊಹ್ಲಿ ವಿರುದ್ಧ ಒಮ್ಮೆ ಎಲ್ ಬಿಡಬ್ಲ್ಯು ತೀರ್ಪು ಬಂದರೂ, ರಿವ್ಯೂ ಬಳಸಿ ನಾಟೌಟ್ ಆದರು. ಇನ್ನೊಮ್ಮೆ ವೃದ್ಧಿಮಾನ್ ಸಹಾ ಅವರನ್ನು ಸುಲಭವಾಗಿ ಸ್ಟಂಪ್ ಔಟ್ ಮಾಡುವ ಅವಕಾಶವನ್ನು ಬಾಂಗ್ಲಾ ಮಿಸ್ ಮಾಡಿಕೊಂಡಿತು.
ಇದರ ಲಾಭವೆತ್ತಿದ ಟೀಂ ಇಂಡಿಯಾ ಭೋಜನ ವಿರಾಮದ ವೇಳೆಗೆ 4 ವಿಕೆಟ್ ನಷ್ಟಕ್ಕೆ 477 ರನ್ ಗಳಿಸಿತ್ತು. ನಾಯಕನ ಬೆನ್ನಿಗೆ ನಿಂತು ಆಡುತ್ತಿರುವ ರೆಹಾನೆ 82 ರನ್ ಗಳಿಸಿದರು. ಕೊಹ್ಲಿ-ರೆಹಾನೆ ಜೋಡಿ 222 ರನ್ ಗಳ ಜತೆಯಾಟ ನಿಭಾಯಿಸಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ