3ನೇ ಟೆಸ್ಟ್‌ನಲ್ಲಿ ಐಯಾನ್ ಬೆಲ್ ಅಜೇಯ 65: ಆಸೀಸ್ ವಿರುದ್ಧ ಇಂಗ್ಲೆಂಡ್‍‌ಗೆ ಜಯ

ಶನಿವಾರ, 1 ಆಗಸ್ಟ್ 2015 (13:51 IST)
ಬರ್ಮಿಂಗ್‌ಹ್ಯಾಮ್: ಎಡ್ಗ್‌ಬಾಸ್ಟನ್‌ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರನ್ನು ತಮ್ಮ ಬ್ಯಾಟಿಂಗ್ ಮೂಲಕ ರಂಜಿಸಿದ ಐಯಾನ್ ಬೆಲ್ ಅಜೇಯ ಅರ್ಧಶತಕ ರನ್ ಬಾರಿಸುವ ಮೂಲಕ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾವನ್ನು 8 ವಿಕೆಟ್‌ಗಳಿಂದ ಸೋಲಿಸಿ ಮೂರನೇ ಟೆಸ್ಟ್‌ನಲ್ಲಿ ಜಯಗಳಿಸಿದೆ.

ಇನ್ನೂ ಎರಡು ದಿನಗಳಿರುವಂತೆಯೇ ಜಯವನ್ನು ಗಳಿಸಿದ ಇಂಗ್ಲೆಂಡ್ ಐದು ಪಂದ್ಯಗಳ ಆಷಸ್ ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದೆ. ಸಾಧಾರಣ 121 ರನ್ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್  ಶುಕ್ರವಾರ ಮೂರನೇ ದಿನ  2 ವಿಕೆಟ್ ಕಳೆದುಕೊಂಡು 124 ರನ್ ಗಳಿಸಿ ಜಯಭೇರಿ ಬಾರಿಸಿತು. 
 
 ಬೆಲ್  ಅಜೇಯ 65 ಮತ್ತು ಜೋಯಿ ರೂಟ್ ಅಜೇಯ 38 ರನ್‌ನೊಂದಿಗೆ ಮಿಚೆಲ್ ಮಾರ್ಷ್ ಬೌಲಿಂಗ್‌ನಲ್ಲಿ ಗೆಲುವಿನ ಬೌಂಡರಿ ಬಾರಿಸಿದರು.  ಇಂಗ್ಲೆಂಡ್ ಆರಂಭದಲ್ಲೇ ಮಿಚೆಲ್ ಸ್ಟಾರ್ಕ್‌ ಅವರ ಸ್ವಿಂಗ್ ಡೆಲಿವರಿಗೆ ಅಲಸ್ಟೈರ್ ಕುಕ್ ಬೌಲ್ಡ್ ಆಗಿದ್ದರಿಂದ ಇಂಗ್ಲೆಂಡ್ ತಂಡದಲ್ಲಿ ಆತಂಕ ಮೂಡಿತ್ತು. ಆದರೆ ಬೆಲ್ ಅಬ್ಬರದ ಬ್ಯಾಟಿಂಗ್ ಆಡಿ ಸ್ಟಾರ್ಕ್ ಬೌಲಿಂಗ್‌ನಲ್ಲಿ ಏಳು ಎಸೆತಗಳಲ್ಲಿ ನಾಲ್ಕು ಬೌಂಡರಿಗಳನ್ನು ಬಾರಿಸಿದರು.
 
 ಬೆಲ್ ಸ್ಕೋರ್ 20 ರನ್‌ಗಳಾಗಿದ್ದಾಗ, ಸ್ಟಾರ್ಕ್ ಬೌಲಿಂಗ್‌ನಲ್ಲಿ ಬ್ಯಾಟ್ ತುದಿಗೆ ಚೆಂಡು ತಾಗಿ ಎರಡನೇ ಸ್ಲಿಪ್‌ನಲ್ಲಿ ಮೈಕೇಲ್ ಕ್ಲಾರ್ಕ್ ಕ್ಯಾಚ್ ಡ್ರಾಪ್ ಮಾಡಿದ್ದರಿಂದ ಜೀವದಾನ ಸಿಕ್ಕಿತು. 
 
ಇಂಗ್ಲೆಂಡ್ ಓಪನರ್ ಅಡಾಂ ಲಿತ್ ಕೂಡ ಹ್ಯಾಜಲ್‌ವುಡ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯುಗೆ ಬಲಿಯಾದರು.  ಬೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ಲೇಟ್ ಕಟ್ ಬೌಂಡರಿ ಮೂಲಕ 68 ರನ್ ಬಾರಿಸಿದರು. 
 

ವೆಬ್ದುನಿಯಾವನ್ನು ಓದಿ