ಅಬುಧಾಬಿ: ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಹಸ್ತಲಾಘವ ವಿವಾದ ತಾರಕಕ್ಕೇರಿದೆ. ಈ ಮಧ್ಯೆ ಇಂದು ನಡೆಯಬೇಕಿದ್ದ ಯುಎಇ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ವಿಳಂಬವಾಗಿದೆ.
ಭಾರತ–ಪಾಕ್ ಪಂದ್ಯದ ವೇಳೆ ಮ್ಯಾಚ್ ರೆಫ್ರಿ ಆಗಿದ್ದ ಆಂಡಿ ಪೈಕ್ರಾಫ್ಟ್ ಅವರನ್ನು ಟೂರ್ನಿಯಿಂದ ವಜಾಗೊಳಿಸುವಂತೆ ಈ ಹಿಂದೆ ಪಾಕ್ ಕ್ರಿಕೆಟ್ ಮಂಡಳಿ ಐಸಿಸಿಗೆ ದೂರು ನೀಡಿತ್ತು. ಆದರೆ ಐಸಿಸಿ ಮಾತ್ರ ಆ ರೀತಿಯ ಯಾವುದೇ ಕ್ರಮ ತೆಗೆದುಕೊಳ್ಳುವುದನ್ನು ನಿರಾಕರಿಸಿತು.
ಇದರಿಂದ ಕೋಪಗೊಂಡ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಟೂರ್ನಿಯಿಂದ ತನ್ನ ಹೆಸರನ್ನು ಹಿಂಪಡೆಯಲು ನಿರ್ಧರಿಸಿದೆ ಎಂಬ ವದಂತಿ ಹಬ್ಬಿತ್ತು. ತಮ್ಮ ನಿಲುವನ್ನು ಸ್ಪಷ್ಟಪಡಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಂದು ಗಂಟೆ ಸಮಯಾವಕಾಶ ಕೇಳಿದೆ ಎನ್ನಲಾಗಿತ್ತು. ಹೀಗಾಗಿ, ಪಂದ್ಯದ ಟಾಸ್ ವಿಳಂಬವಾಗಿದೆ. ಪಾಕ್ ಆಟಗಾರರು ತಡವಾಗಿ ಮೈದಾನಕ್ಕೆ ಬಂದಿದ್ದಾರೆ.
ಇಂದು ರಾತ್ರಿ 8 ಗಂಟೆಗೆ ಪಾಕಿಸ್ತಾನ ತಂಡ ತನ್ನ ಲೀಗ್ ಹಂತದ ಕೊನೆಯ ಪಂದ್ಯವನ್ನು ದುಬೈನಲ್ಲಿ ಆಡಬೇಕಿತ್ತು. 7.30ಕ್ಕೆ ಟಾಸ್ ನಡೆಯಬೇಕಿತ್ತು. ಆದರೆ, 8.30ಕ್ಕೆ ಟಾಸ್ ಆಗಿದ್ದು, ಯುಎಇ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿದೆ. ಉಭಯ ತಂಡಗಳಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.