ಮುಂಬೈ: ಪುರುಷರ ಐಪಿಎಲ್ ಜೊತೆಗೆ ಮಹಿಳೆಯರ ಐಪಿಎಲ್ ಕೂಟಕ್ಕೂ ಹರಾಜು ಪ್ರಕ್ರಿಯೆಗೆ ದಿನ ನಿಗದಿಯಾಗಿದೆ. ಈ ಬಾರಿ ಪ್ರತೀ ಫ್ರಾಂಚೈಸಿಯ ಮೊತ್ತ ಹೆಚ್ಚಾಗಿದೆ.
ಡಿಸೆಂಬರ್ 9 ರಂದು ಮುಂಬೈನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಪ್ರತಿಯೊಂದು ಫ್ರಾಂಚೈಸಿಯ ಹಣದ ಮೊತ್ತವನ್ನು 13.5 ಕೋಟಿ ರೂ.ಗೆ ಹೆಚ್ಚಳ ಮಾಡಲಾಗಿದೆ. ಇದು ಎರಡನೇ ಆವೃತ್ತಿಯ ಮಹಿಳಾ ಐಪಿಎಲ್ ಆಗಿದ್ದು, ಫೆಬ್ರವರಿಯಲ್ಲಿ ಟೂರ್ನಮೆಂಟ್ ನಡೆಯಲಿದೆ.
ಒಟ್ಟು ಐದು ಫ್ರಾಂಚೈಸಿಗಳಿದ್ದು, ಈ ಬಾರಿ ಮುಂಬೈ ಮತ್ತು ಬೆಂಗಳೂರಿನಲ್ಲಿ ಪಂದ್ಯ ನಡೆಯುವ ಸಾಧ‍್ಯತೆಯಿದೆ. ಗುಜರಾತ್, ಮುಂಬೈ, ಬೆಂಗಳೂರು, ಡೆಲ್ಲಿ, ಯುಪಿ ವಾರಿಯರ್ಸ್ ಎಂಬ ಐದು ಮಹಿಳಾ ಐಪಿಎಲ್ ಫ್ರಾಂಚೈಸಿಗಳಿವೆ. ಕಳೆದ ಬಾರಿ ಮುಂಬೈ ಚಾಂಪಿಯನ್ ಆಗಿತ್ತು.
ಗುಜರಾತ್ ಬಳಿ ಎಲ್ಲರಿಗಿಂತ ಹೆಚ್ಚು ಅಂದರೆ 5.95 ಕೋಟಿ ರೂ.ಗಳಿವೆ. ಯುಪಿ ವಾರಿಯರ್ಸ್ ಬಳಿ 4 ಕೋಟಿ ರೂ.ಗಳಿವೆ. ಆರ್ ಸಿಬಿ ಕಳೆದ ಬಾರಿ ಸ್ಮೃತಿ ಮಂಧನಾ ನಾಯಕತ್ವದಲ್ಲಿ ಕಣಕ್ಕಿಳಿದು ಸತತ ಸೋಲುಗಳಿಂದ ಕಂಗೆಟ್ಟಿತ್ತು. ಈ ಬಾರಿ ಹೊಸ ಆಟಗಾರರ ಖರೀದಿಗೆ ಆರ್ ಸಿಬಿ ಬಳಿ 3.35 ಕೋಟಿ ರೂ. ಹಣವಿದೆ. ಉಳಿದಂತೆ ಮುಂಬೈ ಬಳಿ 2.1 ಕೋಟಿ, ಡೆಲ್ಲಿ ಬಳಿ 2.25 ಕೋಟಿ ರೂ. ಹಣವಿದೆ.