ವಿಶ್ವಕಪ್ ಗೆದ್ದ ಆಸೀಸ್‌ಗೆ 24.84 ಕೋಟಿ ರೂ, ರನ್ನರ್‌ ಅಪ್ ಕಿವೀಸ್‌ಗೆ 10 ಕೋಟಿ ರೂ. ‌

ಭಾನುವಾರ, 29 ಮಾರ್ಚ್ 2015 (16:59 IST)
ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್ ಭರ್ಜರಿ ಗೆಲುವು ಗಳಿಸಿದ ಆಸ್ಟ್ರೇಲಿಯಾ ಸ್ವದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ವಿಶ್ವಕಪ್ ಗೆಲ್ಲುವ ಮೂಲಕ ಐದು ಬಾರಿ ವಿಶ್ವಕಪ್ ಮುಡಿಗೇರಿಸಿಕೊಂಡ ಕೀರ್ತಿಗೆ ಪಾತ್ರವಾಗಿದೆ.  ಆಸೀಸ್ ನಾಯಕ ಮೈಕೇಲ್ ಕ್ಲಾರ್ಕ್ ಅವರು ವಿಶ್ವಕಪ್ ಪಂದ್ಯಾವಳಿ ಬಳಿಕ ಏಕದಿನ ಪಂದ್ಯಗಳಿಗೆ ನಿವೃತ್ತಿ ಘೋಷಿಸಿದ್ದು   ಮೈಕೇಲ್ ಕ್ಲಾರ್ಕ್ ಅವರ ವಿದಾಯದ ಪಂದ್ಯವಾಗಿ ಆಸೀಸ್ ಜಯಗಳಿಸಿದರು.  ಆಸ್ಟ್ರೇಲಿಯಾ ತಂಡದ ಆಟಗಾರರು ವಿಶ್ವಕಪ್ ವಿಶ್ವಕಪ್ ಎತ್ತಿಹಿಡಿದು ಸಂಭ್ರಮಿಸಿದರು.  

 
ವಿದಾಯದ ಪಂದ್ಯದಲ್ಲಿ ಕ್ಲಾರ್ಕ್ 72 ರನ್ ಬಾರಿಸುವ ಮೂಲಕ ಗೌರವದಿಂದ ನಿರ್ಗಮಿಸಿದರು. ಈ ಬಾರಿ ವಿಶ್ವಕಪ್ ವಿಜೇತರಾದ ಆಸ್ಟ್ರೇಲಿಯಾಕ್ಕೆ 24. 84 ಕೋಟಿ ರೂ. ಬಹುಮಾನದ ಹಣ ದಕ್ಕಿದ್ದರೆ ರನ್ನರ್ಸ್ ಅಪ್ ನ್ಯೂಜಿಲೆಂಡ್ ತಂಡಕ್ಕೆ 10 ಕೋಟಿ ರೂ. ಬಹುಮಾನದ ಹಣ ದಕ್ಕಿದೆ. ಆಸ್ಟ್ರೇಲಿಯಾ 1987, 1999, 2003 ಮತ್ತು 2007 ಇಸವಿಗಳಲ್ಲಿ ವಿಶ್ವಕಪ್ ಗೆದ್ದಿತ್ತು.

ಈಗ 2015ರಲ್ಲೂ ವಿಶ್ವಕಪ್ ಮುಡಿಗೇರಿಸಿಕೊಂಡು ಐದನೇ ಬಾರಿ ವಿಶ್ವಕಪ್ ಗೆದ್ದ ದಾಖಲೆ ನಿರ್ಮಿಸಿದೆ.  ಪ್ಲೇಯರ್ ಆಫ್ ಟೂರ್ನ್‌ಮೆಂಟ್ ಪ್ರಶಸ್ತಿ ಮಿಚೆಲ್ ಸ್ಟಾರ್ಕ್ ಅವರಿಗೆ ದಕ್ಕಿದರೆ, ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಜೇಮ್ಸ್ ಫಾಕ್ನರ್ ಪಾತ್ರರಾದರು. 

ಭಾರತೀಯರು ಐಸಿಸಿ ವಿಶ್ವಕಪ್ ಫೈನಲ್ ಗೆದ್ದಿಲ್ಲದಿರಬಹುದು. ಆದರೆ ಇಬ್ಬರು ಭಾರತೀಯರಾದ ಸಚಿನ್ ತೆಂಡೂಲ್ಕರ್ ಮತ್ತು ಐಸಿಸಿ ಅಧ್ಯಕ್ಷ  ಎನ್. ಶ್ರೀನಿವಾಸನ್ ಮೆಲ್ಬೋರ್ನ್ ಬಹುಮಾನ ವಿತರಣೆ ಸಮಾರಂಭದಲ್ಲಿ ಉಪಸ್ಥಿತರಿದ್ದ ಪ್ರಮುಖರು. ತೆಂಡೂಲ್ಕರ್ ಪಂದ್ಯ ಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಟ್ರೋಫಿಗಳನ್ನು ಕ್ರಮವಾಗಿ ಜೇಮ್ಸ್ ಫಾಕ್ನರ್ ಮತ್ತು ಮಿಚೆಲ್ ಸ್ಟಾರ್ಕ್ ಅವರಿಗೆ ನೀಡಿದರು. ಶ್ರೀನಿವಾಸನ್ ಆಸಿಸ್ ತಂಡಕ್ಕೆ ವಿಶ್ವಕಪ್ ಹಸ್ತಾಂತರಿಸಿದರು. 

ತೆಂಡೂಲ್ಕರ್ ಅವರನ್ನು ವಿಶ್ವಕಪ್ ಬ್ರಾಂಡ್ ರಾಯಭಾರಿಯಾಗಿ ಹೆಸರಿಸಲಾಯಿತು ಮತ್ತು ಅವರನ್ನು ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಹರ್ಷೋದ್ಗಾರದೊಂದಿಗೆ ಅಭಿನಂದಿಸಲಾಯಿತು. ತೆಂಡೂಲ್ಕರ್ 6 ವಿಶ್ವಕಪ್‌ಗಳಲ್ಲಿ ಆಡಿದ್ದು, ವಿಶ್ವಕಪ್ ಇತಿಹಾಸದಲ್ಲಿ ಅತ್ಯಧಿಕ ರನ್ ಸ್ಕೋರ್ ಮಾಡಿದ ದಾಖಲೆ ನಿರ್ಮಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ