ಮೂರನೇ ಟೆಸ್ಟ್‌ನಲ್ಲಿ ಸೋಲಿನ ಸುಳಿಯಲ್ಲಿ ಸಿಕ್ಕಿಬಿದ್ದ ಆಸ್ಟ್ರೇಲಿಯಾ

ಶುಕ್ರವಾರ, 31 ಜುಲೈ 2015 (19:09 IST)
ಎಡ್‌ಬಾಸ್ಟನ್: ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ಆಷಸ್ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ ಕೂಡ ಸಾಧಾರಣ ಬ್ಯಾಟಿಂಗ್ ಪ್ರದರ್ಶನದಿಂದ ಸೋಲಿನ ಸುಳಿಯಲ್ಲಿ ಸಿಕ್ಕಿಬಿದ್ದಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಆಂಡರ್‌ಸನ್ ಅವರ ಬಿರುಗಾಳಿಯ ಬೌಲಿಂಗ್ ದಾಳಿಗೆ ಸಿಲುಕಿ 136 ರನ್ ತೀರಾ ಕಳಪೆ ಮೊತ್ತಕ್ಕೆ ಔಟಾಗಿತ್ತು.  ಕ್ರಿಸ್ ರೋಜರ್ಸ್ ಅವರ 52 ರನ್ ಹೊರತುಪಡಿಸಿ ಯಾರೊಬ್ಬರೂ 20 ರನ್ ಗಡಿಯನ್ನು ದಾಟಿರಲಿಲ್ಲ.

ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 281 ರನ್ ಬಾರಿಸುವ ಮೂಲಕ ಉತ್ತಮ ಮುನ್ನಡೆ ಸಾಧಿಸಿತ್ತು. ಐಯಾನ್ ಬೆಲ್ 53, ಜೋಯಿ ರೂಟ್ 63 ಮತ್ತು  ಮೊಯಿನ್ ಅಲಿ ಅವರ 59 ರನ್ ನೆರವಿನಿಂದ ಈ ಮೊತ್ತವನ್ನು ಮುಟ್ಟಲು ಇಂಗ್ಲೆಂಡ್‌ಗೆ ಸಾಧ್ಯವಾಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಉತ್ತಮ ಸ್ಕೋರ್ ಕಲೆಹಾಕದೇ ಸಾಧಾರಣ ಮೊತ್ತವಾದ 265 ರನ್ ಗಳಿಸಿತ್ತು. ಸ್ಟೀವನ್ ಫಿನ್ ಬೌಲಿಂಗ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ಹೆಚ್ಚಿನ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ.

ಸ್ಟೀವನ್ ಫಿನ್  21 ಓವರುಗಳಲ್ಲಿ 3 ಮೇಡನ್ ಓವರ್ ಮಾಡಿ 79 ರನ್ ನೀಡಿದ್ದು,  6 ವಿಕೆಟ್ ಕಬಳಿಸಿದರು.  ಮೊದಲ ಇನ್ನಿಂಗ್ಸ್ ಲೀಡ್‌ನಿಂದಾಗಿ ಇಂಗ್ಲೆಂಡ್‌ ಈಗ 2 ವಿಕೆಟ್ ಕಳೆದುಕೊಂಡು 64 ರನ್ ಸ್ಕೋರ್ ಮಾಡಿದ್ದು, ಇನ್ನು  ಗೆಲ್ಲುವುದಕ್ಕೆ 57 ರನ್‌ಗಳು ಮಾತ್ರ ಬಾಕಿವುಳಿದಿವೆ. ಇಂಗ್ಲೆಂಡ್ ಗೆದ್ದರೆ ಆಷಸ್ ಸರಣಿಯಲ್ಲಿ 2-1ರಿಂದ ಇಂಗ್ಲೆಂಡ್ ಮುನ್ನಡೆ ಸಾಧಿಸಲಿದೆ. 

ವೆಬ್ದುನಿಯಾವನ್ನು ಓದಿ