ವಿರಾಟ್ ಕೊಹ್ಲಿ, ಅನಿಲ್ ಕುಂಬ್ಳೆ ದುರ್ವರ್ತನೆ ತೋರಿದ್ದರಂತೆ! ಆಸ್ಟ್ರೇಲಿಯಾ ಪತ್ರಿಕೆಯ ಗಂಭೀರ ಆರೋಪ

ಶುಕ್ರವಾರ, 10 ಮಾರ್ಚ್ 2017 (09:53 IST)
ಸಿಡ್ನಿ: ಡಿಆರ್ ಎಸ್ ವಿಚಾರದಲ್ಲಿ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ತಪ್ಪು ಮಾಡಿದ್ದಾರೆ ಎಂದು ಭಾರತದಾದ್ಯಂತ ಆರೋಪ ಕೇಳಿ ಬರುತ್ತಿದ್ದರೆ, ಅತ್ತ ಆಸ್ಟ್ರೇಲಿಯಾ ಮಾಧ್ಯಮಗಳು ಟೀಂ ಇಂಡಿಯಾ ನಾಯಕ ಮತ್ತು ಅನಿಲ್ ಕುಂಬ್ಳೆ ವಿರುದ್ಧ ಗಂಭೀರ ಆರೋಪ ಮಾಡಿದೆ.

 
ಬೆಂಗಳೂರು ಟೆಸ್ಟ್ ಪಂದ್ಯದ ನಡುವೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದ ಅಧಿಕಾರಿಯೊಬ್ಬರ ಮೇಲೆ ಡ್ರಿಂಕ್ಸ್ ಬಾಟಲಿ ಎಸೆದು ದುರ್ವರ್ತನೆ ತೋರಿದರು ಎಂದು ದಿ ಡೈಲಿ ಟೆಲಿಗ್ರಾಫ್ ಪತ್ರಿಕೆ ಆರೋಪಿಸಿದೆ.  ಅಲ್ಲದೆ ಡ್ರೆಸ್ಸಿಂಗ್ ರೂಂಗೆ ಹೋದ ಮೇಲೆ ಕೊಹ್ಲಿ ಆಸೀಸ್ ಬ್ಯಾಟ್ಸ್ ಮನ್ ಪೀಟರ್ ಹ್ಯಾಂಡ್ ಕೋಂಬ್ ಕುತ್ತಿಗೆ ಸೀಳುತ್ತೇನೆ ಎನ್ನುವ ರೀತಿಯಲ್ಲಿ ಸಂಜ್ಞೆ ಮಾಡಿದ್ದರು ಎಂದು ಆರೋಪಿಸಿದೆ.

ಅಷ್ಟೇ ಅಲ್ಲ, ಮೋಸ್ಟ್ ಜೆಂಟಲ್ ಮ್ಯಾನ್ ಎಂದು ಕರೆಯಿಸಿಕೊಳ್ಳುವ ಕೋಚ್ ಅನಿಲ್ ಕುಂಬ್ಳೆ ವರ್ತನೆ ಬಗ್ಗೆಯೂ ಪತ್ರಿಕೆ ಆಕ್ಷೇಪಿಸಿದೆ. ವಿರಾಟ್ ಕೊಹ್ಲಿಗೆ ವಿವಾದಾತ್ಮಕ ಎಲ್ ಬಿಡಬ್ಲ್ಯು ತೀರ್ಪು ನೀಡಿದ್ದಕ್ಕೆ ಕೋಚ್ ಕುಂಬ್ಳೆ ಸಿಟ್ಟಾಗಿದ್ದರು. ಅಷ್ಟೇ ಅಲ್ಲದೆ, ಅಂಪಾಯರ್ ಗಳ ರೂಂ ಗೆ ನುಗ್ಗಿ ಪ್ರಶ್ನಿಸಿದ್ದರು ಎಂದು ಆರೋಪಿಸಲಾಗಿದೆ. ಆದರೆ ಇದೆಲ್ಲಾ ಭಾರತ ಸ್ಟೀವ್ ಸ್ಮಿತ್ ವಿರುದ್ಧ ಮಾಡಿದ್ದ ಆರೋಪಕ್ಕೆ ಪ್ರತ್ಯಾರೋಪ ಮಾಡುವ ತಂತ್ರವೋ, ನಿಜವಾಗಿಯೂ ನಡೆದಿರುವುದೋ ಎಂದು ಖಚಿತವಾಗಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ