ಭಾರತ-ಆಸೀಸ್ ಏಕದಿನ: ಸ್ಟೀವ್ ಸ್ಮಿತ್ ಹಿಂದೆ ಕುಸಿದ ಆಸ್ಟ್ರೇಲಿಯಾ

ಭಾನುವಾರ, 19 ಜನವರಿ 2020 (17:19 IST)
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯವನ್ನು ಗೆಲ್ಲಲು ಆಸೀಸ್ ಭಾರತಕ್ಕೆ 287 ರನ್ ಗಳ ಗುರಿ ನಿಗದಿಪಡಿಸಿದೆ.


ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಸ್ಟೀವ್ ಸ್ಮಿತ್ ಶತಕದ (131) ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 286 ರನ್ ಗಳಿಸಿತು. ಬಂಡೆಯಂತೆ ನಿಂತು ಆಡಿದ ಸ್ಮಿತ್ ಔಟಾಗುತ್ತಿದ್ದಂತೇ ಆಸ್ಟ್ರೇಲಿಯಾ ನಾಟಕೀಯ ಕುಸಿತ ಕಂಡಿತು. ಆರಂಭಿಕ ಡೇವಿಡ್ ವಾರ್ನರ್ 3 ರನ್, ಏರನ್ ಫಿಂಚ್ 19 ರನ್ ಗೆ ವಿಕೆಟ್ ಒಪ್ಪಿಸಿ ಆಸ್ಟ್ರೇಲಿಯಾಕ್ಕೆ ಆಘಾತ ತಂದಿತ್ತರು. ಆದರೆ ಬಳಿಕ ಲಬುಶೇನ್ 54 ರನ್ ಗಳಿಸಿ ಸ್ಮಿತ್ ಗೆ ಉತ್ತಮ ಸಾಥ್ ನೀಡಿದರು.

ಬಳಿಕ ಅಲೆಕ್ಸ್ ಕ್ಯಾರಿ 35 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್ ಮನ್ ಗಳು ಬೇಗನೇ ವಿಕೆಟ್ ಕಳೆದುಕೊಂಡರು. ಭಾರತದ ಪರ ಮೊಹಮ್ಮದ್ ಶಮಿ 4, ರವೀಂದ್ರ ಜಡೇಜಾ 2 ವಿಕೆಟ್ ಮತ್ತು ಕುಲದೀಪ್ ಯಾದವ್ ಮತ್ತು ನವದೀಪ್ ಸೈನಿ 1 ವಿಕೆಟ್ ಕಬಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ