ಐದನೇ ಬಾರಿಗೆ ವಿಶ್ವಕಪ್ ಮಡಿಲಿಗೆ ಹಾಕಿಕೊಂಡ ಆಸ್ಟ್ರೇಲಿಯಾ

ಭಾನುವಾರ, 29 ಮಾರ್ಚ್ 2015 (15:56 IST)
ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ವಿಶ್ವಕಪ್ ಫೈನಲ್ ಪಂದ್ಯದಲ್ಲಿ  ನ್ಯೂಜಿಲೆಂಡ್ ಅಲ್ಪಮೊತ್ತವಾದ 183 ರನ್ ಬೆನ್ನಟ್ಟಿದ ಆಸ್ಟ್ರೇಲಿಯಾ ಪರ ಮೈಕೇಲ್ ಕ್ಲಾರ್ಕ್ ಅವರ ಅಬ್ಬರದ 72 ಎಸೆತಗಳಿಗೆ 74 ರನ್ ಮತ್ತು ಸ್ಟೀವನ್ ಸ್ಮಿತ್ ಅವರ 71 ಎಸೆತಗಳಿಗೆ ಅಜೇಯ 56  ರನ್ ನೆರವಿನಿಂದ  33.1 ಓವರುಗಳಲ್ಲಿ 186 ರನ್ ಗಳಿಸುವ ಮೂಲಕ ಅನಾಯಾಸವಾಗಿ ವಿಶ್ವಕಪ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.

ಸ್ವದೇಶದ ಮೈದಾನದಲ್ಲಿ ಆಸಿಸ್ ಇದೇ ಮೊದಲ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಗೆದ್ದ ಸಂಭ್ರಮದಲ್ಲಿ ಮುಳುಗಿತು.   ಆರಂಭಿಕ ಆಟಗಾರ ಆರಾನ್ ಫಿಂಚ್ ಬೌಲ್ಟ್ ಬೌಲಿಂಗ್‌ನಲ್ಲಿ ಅವರಿಗೇ ಕ್ಯಾಚಿತ್ತು ಔಟಾಗಿದ್ದರಿಂದ ಆಸ್ಟ್ರೇಲಿಯಾ ಆರಂಭಿಕ ಆಘಾತ ಅನುಭವಿಸಿತು. ಆದರೆ ವಾರ್ನರ್ ಮತ್ತು ಸ್ಟೀವನ್ ಸ್ಮಿತ್ ಉತ್ತಮ ಜೊತೆಯಾಟವಾಡಿದರು. ಆಸಿಸ್ ಸ್ಕೋರ್ 63 ರನ್‌ಗಳಾಗಿದ್ದಾಗ ವಾರ್ನರ್  ಹೆನ್ರಿ ಬೌಲಿಂಗ್‌ನಲ್ಲಿ ಎಲಿಯಟ್‌ಗೆ ಕ್ಯಾಚಿತ್ತು ಔಟಾದರು. ಅವರ ಸ್ಕೋರಿನಲ್ಲಿ 7 ಬೌಂಡರಿಗಳಿದ್ದವು. ನಂತರ  ಸ್ಟೀವನ್ ಸ್ಮಿತ್ ಮತ್ತು ಮೈಕೇಲ್ ಕ್ಲಾರ್ಕ್ 112 ರನ್‌ಗಳ ಉತ್ತಮ ಜೊತೆಯಾಟವಾಡಿದರು.

 175 ರನ್‌ಗಳಾಗಿದ್ದಾಗ ಮೈಕೇಲ್ ಕ್ಲಾರ್ಕ್  ಹೆನ್ರಿ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಅವರ 74 ರನ್ ಸ್ಕೋರಿನಲ್ಲಿ 10 ಬೌಂಡರಿ ಮತ್ತು ಒಂದು ಸಿಕ್ಸರ್ ಇತ್ತು.  ನ್ಯೂಜಿಲೆಂಡ್ ಸ್ಕೋರನ್ನು ಅನಾಯಾಸವಾಗಿ ಮುಟ್ಟಿದ ಆಸ್ಟ್ರೇಲಿಯಾ 5 ನೇ ಬಾರಿಗೆ ವಿಶ್ವಕಪ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿತು.  ಸ್ವದೇಶಿ ಪಿಚ್‌ಗಳಲ್ಲಿ ಎಲ್ಲಾ ವಿಜಯಗಳನ್ನು ಗಳಿಸಿ ಮೊಟ್ಟಮೊದಲ ಬಾರಿಗೆ ಫೈನಲ್ ಹಂತಕ್ಕೆ ತಲುಪಿದ್ದ ನ್ಯೂಜಿಲೆಂಡ್ ಆಸ್ಟ್ರೇಲಿಯಾದ ಮೆಲ್ಬರ್ನ್ ಮೈದಾನದಲ್ಲಿ  ಸೋಲಪ್ಪಿತು.

 ನ್ಯೂಜಿಲೆಂಡ್ ಪರ ಹೆನ್ರಿ 3 ವಿಕೆಟ್ ಗಳಿಸಿದರೆ, ಬೌಲ್ಟ್ 1 ವಿಕೆಟ್ ಪಡೆದರು. ನ್ಯೂಜಿಲೆಂಡ್ ಸೋಲಿನಿಂದಾಗಿ ಫೈನಲ್ ಪ್ರವೇಶಿಸಿ ಮೊಟ್ಟಮೊದಲ ಬಾರಿಗೆ ವಿಶ್ವಕಪ್ ಪ್ರಶಸ್ತಿಯನ್ನು ಬಾಚಿಕೊಳ್ಳಬೇಕೆಂಬ ಕನಸು ಕಮರಿ ಹೋಯಿತು. ಇದಲ್ಲದೇ ಫೈನಲ್ಸ್ ಪಂದ್ಯದಲ್ಲಿ ಯಾವುದೇ ಹಣಾಹಣಿ ಹೋರಾಟವಿಲ್ಲದೇ ಆಸ್ಟ್ರೇಲಿಯಾ ನಿರಾತಂಕವಾಗಿ ಅಲ್ಪಸ್ಕೋರಿನ ಗುರಿ ತಲುಪಿ ವಿಶ್ವಕಪ್ ಟ್ರೋಫಿಯನ್ನು ಗೆದ್ದಿತು. ಈ ಪಂದ್ಯದಲ್ಲಿ ಯಾವುದೇ ಹೋರಾಟವಿಲ್ಲದೇ ಸುಲಭವಾಗಿ ವಿಶ್ವಕಪ್ ಆಸ್ಟ್ರೇಲಿಯಾದ ಮಡಿಲಿಗೆ ಬಿತ್ತು. 

ವೆಬ್ದುನಿಯಾವನ್ನು ಓದಿ