ಆಫ್ಘನ್ ವಿರುದ್ಧ ರನ್ ಹೊಳೆ ಹರಿಸಿದ ಆಸ್ಟ್ರೇಲಿಯಾಕ್ಕೆ 275 ರನ್ ಗೆಲುವು

ಬುಧವಾರ, 4 ಮಾರ್ಚ್ 2015 (19:19 IST)
ಪರ್ತ್: ಪೂಲ್ ಎ ವಿಭಾಗದಲ್ಲಿ ಪರ್ತ್ ಡಬ್ಲ್ಯುಸಿಎ ಮೈದಾನದಲ್ಲಿ ಆಸ್ಟ್ರೇಲಿಯಾ ಮತ್ತು ಆಫ್ಘಾನಿಸ್ತಾನ ನಡುವೆ ವಿಶ್ವಕಪ್ ಪಂದ್ಯದಲ್ಲಿ ಆಫ್ಘಾನಿಸ್ತಾನ 142 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲನ್ನಪ್ಪಿದೆ. ಆಸ್ಟ್ರೇಲಿಯಾದ ಬೃಹತ್ ಮೊತ್ತವಾದ 417 ರನ್ ಬೆನ್ನತ್ತಿದ ಆಫ್ಘಾನಿಸ್ತಾನ ಪರ  ಯಾವ ಆಟಗಾರನೂ ಉತ್ತಮ ಸ್ಕೋರ್ ದಾಖಲಿಸಲಿಲ್ಲ ಮತ್ತು ಉತ್ತಮ ಜೊತೆಯಾಟ ಮೂಡಿಬರಲಿಲ್ಲ,

ನವರೋಜ್ ಮಂಗಲ್ ಅವರ 33 ರನ್ ಮತ್ತು ನಜೀಬುಲ್ಲಾ ಜಡ್ರಾನ್ ಅವರ 24 ರನ್ ಬಿಟ್ಟರೆ ಯಾವೊಬ್ಬ ಆಟಗಾರನೂ 20ರನ್ ಗಡಿಯನ್ನು ದಾಟಲಿಲ್ಲ. ಮಿಚಲ್ ಜಾನ್ಸನ್ ಅವರ ಶರವೇಗದ ಬೌಲಿಂಗ್ ದಾಳಿಗೆ ಆಫ್ಘನ್ ವಿಕೆಟ್‌ಗಳು ಒಂದರ ಹಿಂದೊಂದು ಉರುಳಿದವು.

ಜಾನ್ಸನ್ 22 ರನ್ ನೀಡಿ 7.3 ಓವರುಗಳಲ್ಲಿ 4 ವಿಕೆಟ್ ಕಬಳಿಸಿದರೆ, ಸ್ಟಾರ್ಕ್ ಮತ್ತು ಹ್ಯಾಜಲ್‌ವುಡ್ ತಲಾ 2 ವಿಕೆಟ್ ಕಬಳಿಸಿದರು. ರನ್ ಹೊಳೆ ಹರಿಸಿದ ಆಸ್ಟ್ರೇಲಿಯಾ ಆಟಗಾರರು 6 ವಿಕೆಟ್ ಕಳೆದುಕೊಂಡು 417 ರನ್ ದಾಖಲಿಸಿದೆ. ಇದಕ್ಕೆ ಮುಂಚೆ ಮೊದಲ ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಪರ ವಾರ್ನರ್, ಸ್ಮಿತ್ ಮತ್ತು ಮ್ಯಾಕ್ಸ್‌ವೆಲ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ 417 ರನ್ ಬೃಹತ್ ಮೊತ್ತ ದಾಖಲಿಸಿದೆ.

ವಿಶ್ವ ಕಪ್ ಇತಿಹಾಸದಲ್ಲಿ ಅತ್ಯಧಿಕ ಮೊತ್ತವಾಗಿ ದಾಖಲೆ ನಿರ್ಮಿಸಿದೆ. ಡೇವಿಡ್ ವಾರ್ನರ್ ನಾಲ್ಕನೇ ಏಕ ದಿನ ಶತಕ ಬಾರಿಸಿ ದ್ವಿಶತಕ ಬಾರಿಸುವುದರಿಂದ ಸ್ವಲ್ಪದರಿಂದ ಮಿಸ್ ಆದರು.ವಾರ್ನರ್ ಮತ್ತು ಸ್ಮಿತ್ ಎರಡನೇ ವಿಕೆಟ್‌ಗೆ 260 ರನ್ ದಾಖಲಿಸಿದರು. ಆರಾನ್ ಫಿಂಚ್ ಔಟಾದ ಬಳಿಕ ಅವರಿಬ್ಬರು ವೇಗದ ಗತಿಯಲ್ಲಿ ರನ್ ಸುರಿಮಳೆ ಸುರಿಸಿದರು.

ವಾರ್ನರ್ 40 ಎಸೆತಗಳಲ್ಲಿ ತಮ್ಮ ಅರ್ಧಶತಕ ಮುಟ್ಟಿದರೆ, 92 ಎಸೆತಗಳಲ್ಲಿ 100 ರನ್ ಮತ್ತು 116 ಎಸೆತಗಳಲ್ಲಿ 150 ರನ್ ಸಿಡಿಸಿ 133 ಎಸೆತಗಳಲ್ಲಿ 178ರನ್ ಗಳಿಸಿದ್ದಾಗ ಶಪೂರ್ ಜಡ್ರಾನ್‌ಗೆ ಬೌಲಿಂಗ್‌ನಲ್ಲಿ ನಬಿಗೆ ಕ್ಯಾಚಿತ್ತು ಔಟಾದರು.ಕೊನೆಯ  ಹತ್ತು ಓವರುಗಳಲ್ಲಿ ಆಸ್ಟ್ರೇಲಿಯಾ 118 ರನ್ ಗಳಿಸಿದವು. ಮ್ಯಾಕ್ಸ್‌ವೆಲ್ ಕೇವಲ 39 ಎಸೆತಗಳಲ್ಲಿ 88 ರನ್ ಗಳಿಸಿದರು. ಸ್ಮಿತ್ 95 ರನ್ ಗಳಿಸಿದ್ದಾಗ  ಶಪೂರ್‌ ಎಸೆತಕ್ಕೆ ನಜೀಬುಲ್ಲಾಗೆ ಕ್ಯಾಚಿತ್ತು ಔಟಾಗಿದ್ದರಿಂದ ಶತಕ ತಪ್ಪಿಹೋಯಿತು.

ವೆಬ್ದುನಿಯಾವನ್ನು ಓದಿ