ಅಕ್ಸರ್ ಪಟೇಲ್ ಮಾಂತ್ರಿಕ ಬೌಲಿಂಗ್: 6 ಓವರ್, 6 ಮೇಡಿನ್ , 4 ವಿಕೆಟ್

ಶುಕ್ರವಾರ, 28 ಆಗಸ್ಟ್ 2015 (14:29 IST)
ದಕ್ಷಿಣ ಆಫ್ರಿಕಾ ಎ ಮತ್ತು ಭಾರತ ಎ ನಡುವೆ ಎರಡನೇ ಅನಧಿಕೃತ ಟೆಸ್ಟ್ ಪಂದ್ಯದ ಅಂತಿಮ ದಿನ ದಕ್ಷಿಣ ಆಫ್ರಿಕಾ ತಂಡ ಅಕ್ಸರ್ ಪಟೇಲ್ ಅವರ  ಸ್ಪಿನ್ ಬೌಲಿಂಗ್‌ಗೆ ತತ್ತರಿಸಿ ಇಸ್ಪೀಟ್ ಕಾರ್ಡ್‌ಗಳಂತೆ ಉದುರಿಹೋದರು. ಅಕ್ಸರ್ ಪಟೇಲ್ ತನ್ನ 6 ಓವರುಗಳಲ್ಲಿ ಒಂದು ರನ್ ಕೂಡ ಕೊಡದೇ ನಾಲ್ಕು ವಿಕೆಟ್ ಕಬಳಿಸಿದರು. ಈ ಪ್ರಯತ್ನದಿಂದ ಭಾರತ ಪಂದ್ಯವನ್ನು ಇನ್ನಿಂಗ್ಸ್ ಮತ್ತು 81 ರನ್‌ಗಳಿಂದ ಗೆಲುವು ಗಳಿಸಿದೆ.  

18 ಏಕದಿನಗಳಲ್ಲಿ 23 ವಿಕೆಟ್ ಕಬಳಿಸಿರುವ ಅಕ್ಸರ್ ಪಟೇಲ್ ವಯಾನಾಡ್‌ನಲ್ಲಿ ಅಂತಿಮ ದಿನದಂದು ದಕ್ಷಿಣ ಆಫ್ರಿಕಾ ತಂಡವನ್ನು ಬೆಚ್ಚಿಬೀಳಿಸಿದರು. ದ.ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಕಬಳಿಸಿದ್ದ ಅಕ್ಸರ್ ಎರಡನೇ ಇನ್ನಿಂಗ್ಸ್‌ನಲ್ಲಿ ಕೂಡ ಮಾರಕ ಬೌಲಿಂಗ್ ನಡೆಸಿದರು.
 
 ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ 8 ವಿಕೆಟ್‌ಗೆ 417 ರನ್ ಗಳಿಸಿತು. ಬ್ಯಾಟಿಂಗ್‌ನಲ್ಲಿ ಕೂಡ ಅಕ್ಸರ್ ಪಟೇಲ್ ಮಿಂಚಿದ್ದು ಅಜೇಯ 69 ರನ್ ಗಳಿಸಿದ್ದರು.  ಮೊದಲ ಇನ್ನಿಂಗ್ಸ್‌ನಲ್ಲಿ 260 ರನ್ ಗಳಿಸಿದ್ದ ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್‌ನಲ್ಲಿ ಅಕ್ಷರ್ ಪಟೇಲ್ ಅವರ ಮಾರಕ ಸ್ಪಿನ್ ದಾಳಿಗೆ 76 ರನ್‌ಗೆ ಆಲೌಟ್ ಆಗಿದ್ದರಿಂದ ಇನ್ನಿಂಗ್ಸ್ ಮತ್ತು 81 ರನ್‌ಗಳಿಗೆ ಭಾರತ ಎ ಜಯಗಳಿಸಿದೆ. ಈ ಜಯದಿಂದ ಭಾರತ ಎರಡು ಪಂದ್ಯಗಳ ಸರಣಿಯಲ್ಲಿ 1-0ಯಿಂದ ಮುನ್ನಡೆ ಸಾಧಿಸಿದೆ. 
 

ವೆಬ್ದುನಿಯಾವನ್ನು ಓದಿ