ಬಾಂಗ್ಲಾದೇಶದ ಮುಸ್ತಾಫಾ ಕಮಲ್ ಐಸಿಸಿ ಅಧ್ಯಕ್ಷಗಿರಿಗೆ ರಾಜೀನಾಮೆ

ಬುಧವಾರ, 1 ಏಪ್ರಿಲ್ 2015 (14:11 IST)
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಅಧ್ಯಕ್ಷ ಮುಸ್ತಾಫಾ ಕಮಲ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.  ತಮ್ಮ ಸಹೋದ್ಯೋಗಿಗಳು ಕಾನೂನುಬಾಹಿರವಾಗಿ ವರ್ತಿಸಿದ್ದರಿಂದ ರಾಜೀನಾಮೆ ನೀಡಿದ್ದಾಗಿ ಅವರು ಹೇಳಿದ್ದಾರೆ.
 
 ಅಸಂವಿಧಾನಿಕವಾಗಿ ಮತ್ತು ಕಾನೂನುಬಾಹಿರವಾಗಿ ವರ್ತಿಸುವ ಜನರೊಂದಿಗೆ ತಮಗೆ ಕೆಲಸ ಮಾಡಲು ಸಾಧ್ಯವಿಲ್ಲದಿರುವುದು ತಮ್ಮ ರಾಜೀನಾಮೆಗೆ ಮುಖ್ಯ ಕಾರಣ ಎಂದು ಢಾಕಾದಲ್ಲಿ ವರದಿಗಾರರಿಗೆ ತಿಳಿಸಿದರು. 
 
ವಿಶ್ವಕಪ್ ಟ್ರೋಫಿಯನ್ನು ಹಸ್ತಾಂತರಿಸುವ ತಮ್ಮ ಸಂವಿಧಾನಿಕ ಹಕ್ಕನ್ನು ನಿರಾಕರಿಸಿದ ಕೆಲವು ಜನರ ಕಿಡಿಗೇಡಿ ತಂತ್ರಗಳನ್ನು ಬಹಿರಂಗ ಮಾಡುವುದಾಗಿ ಅವರು ಬೆದರಿಕೆ ಹಾಕಿದ ಕೆಲವೇ ದಿನಗಳಲ್ಲಿ ಕಮಲ್ ರಾಜೀನಾಮೆ ಹೊರಬಿದ್ದಿದೆ. 
 
ವಿಶ್ವಕಪ್ ಟ್ರೋಫಿಯನ್ನು ಐಸಿಸಿ ಚೇರ್‌ಮನ್ ಎನ್. ಶ್ರೀನಿವಾಸನ್ ಆಸೀಸ್ ನಾಯಕ ಮೈಕೆಲ್ ಕ್ಲಾರ್ಕ್ ಅವರಿಗೆ ಹಸ್ತಾಂತರಿಸಿದ್ದರು. ಆದರೆ 2015ರ ಜನವರಿಯಲ್ಲಿ ಐಸಿಸಿಯ ನಿಯಮಗಳ ತಿದ್ದುಪಡಿಯ ಅನ್ವಯ ಟ್ರೋಫಿಗಳನ್ನು ಅಧ್ಯಕ್ಷರು ನೀಡಬೇಕೆಂದು ಹೇಳಲಾಗಿತ್ತು ಎಂದು ಕಮಲ್ ಹೇಳಿದ್ದಾರೆ.
 
 ನಾನು ಟ್ರೋಫಿಯನ್ನು ಹಸ್ತಾಂತರಿಸಬೇಕಿತ್ತು. ಇದು ನನ್ನ ಸಂವಿಧಾನಿಕ ಹಕ್ಕು. ಆದರೆ ದುರದೃಷ್ಟವಶಾತ್ ನನಗೆ ಅವಕಾಶ ನೀಡಲಿಲ್ಲ. ನನ್ನ ಹಕ್ಕುಗಳನ್ನು ಅಗೌರವಿಸಲಾಯಿತು. ನಾನು ಸ್ವದೇಶಕ್ಕೆ ವಾಪಸಾದ ಕೂಡಲೇ ಇಡೀ ಜಗತ್ತಿಗೆ ಐಸಿಸಿಯಲ್ಲಿ ಏನು ನಡೆಯುತ್ತಿದೆಯೆಂದು ಬಹಿರಂಗ ಮಾಡುತ್ತೇನೆ.  ಅಂತಹ ಕಿಡಿಗೇಡಿ ಕೃತ್ಯಗಳನ್ನು ಯಾರು ಮಾಡುತ್ತಿದ್ದಾರೆಂದು ತಿಳಿಸುತ್ತೇನೆ ಎಂದು ಕಮಲ್ ಬಾಂಗ್ಲಾದೇಶಿ ಚಾನೆಲ್‌ಗಳಿಗೆ ತಿಳಿಸಿದರು. 
 
 ಭಾರತದ ವಿರುದ್ಧ ಕ್ವಾರ್ಟರ್ ಫೈನಲ್ ಸೋಲಿನ ಸಂದರ್ಭದಲ್ಲಿ ಅಂಪೈರಿಂಗ್ ಪಕ್ಷಪಾತದ ಬಗ್ಗೆ ಟೀಕೆ ಮಾಡಿದ ಕಮಲ್ ಮುಖಪುಟದ ಸುದ್ದಿಯಾಗಿದ್ದರು. ಐಸಿಸಿ ಈ ಕುರಿತು ತನಿಖೆ ನಡೆಸಬೇಕೆಂದು ಹೇಳಿದ ಕಮಲ್ ಅಂಪೈರ್‌ಗಳ ಪ್ರಾಮಾಣಿಕತೆಯನ್ನು ಪ್ರಶ್ನಿಸಿದ್ದರು.

ವೆಬ್ದುನಿಯಾವನ್ನು ಓದಿ