2ನೇ ಏಕದಿನದಲ್ಲಿ ಬಾಂಗ್ಲಾ ಹುಲಿಗಳಿಗೆ ಸೆಡ್ಡು ಹೊಡೆಯಲು ಟೀಂ ಇಂಡಿಯಾ ನಿರ್ಧಾರ

ಶನಿವಾರ, 20 ಜೂನ್ 2015 (14:11 IST)
ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶಕ್ಕೆ ಸೋತ ಭಾರತ ತಂಡ ಶೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ  ನಡೆಯುವ ಎರಡನೇ ಏಕದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಸರಣಿಯನ್ನು ಸಮಮಾಡಿಕೊಳ್ಳುವ ಗುರಿ ಹೊಂದಿದೆ.
 
 ಬಾಂಗ್ಲಾದೇಶ ಮೊದಲ ಏಕದಿನದಲ್ಲಿ ಆಲ್‌ರೌಂಡ್ ಪ್ರದರ್ಶನ ನೀಡಿ ಭಾರತದ ವಿರುದ್ಧ 79 ರನ್ ಜಯವನ್ನು ಗಳಿಸಿತು. ಎಡಗೈ ವೇಗಿ ಮುಸ್ತಾಫಿಜುರ್ ರಹಮಾನ್ ಸ್ವದೇಶಿ ತಂಡಕ್ಕೆ 50 ರನ್ ನೀಡಿ 5 ವಿಕೆಟ್ ಕಬಳಿಸಿ ಜಯವನ್ನು ತಂದಿತ್ತರು. 
 
 ಬಾಂಗ್ಲಾದೇಶಕ್ಕೆ ಇದು 30 ಏಕದಿನ ಪಂದ್ಯಗಳಲ್ಲಿ ನಾಲ್ಕನೇ ಜಯವಾಗಿದ್ದು, ವಿಶ್ವಕಪ್ ಕ್ವಾರ್ಟರ್ ಫೈನಲ್ ಸೋಲಿನ ಸೇಡನ್ನು ಕೂಡ ತೀರಿಸಿಕೊಂಡರು. ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಂಪೈರಿಂಗ್ ತೀರ್ಪಿನಲ್ಲಿ ಲೋಪದೋಷಗಳ ಆರೋಪ ಕೇಳಿಬಂದು ಬಾಂಗ್ಲಾದೇಶದ ಐಸಿಸಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು. 
 ಈ ಜಯದೊಂದಿಗೆ ಬಾಂಗ್ಲಾದೇಶವು 2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಅವಕಾಶ ಹೆಚ್ಚಿಸಿಕೊಂಡಿದೆ.  

ಮಶ್ರಫೆ ಬಿನ್ ಮೊರ್ತಾಜಾ ತಂಡವು ಏಕದಿನ ಶ್ರೇಯಾಂಕದಲ್ಲಿ ಏಳನೇ ಸ್ಥಾನಕ್ಕೆ ಜಿಗಿದಿದ್ದು ವೆಸ್ಟ್ ಇಂಡೀಸ್ ತಂಡವನ್ನು ಹಿಂದಿಕ್ಕಿದೆ. ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ಎರಡೂ ಪಂದ್ಯಕ್ಕೆ ಮುನ್ನ ತಲಾ 88 ಪಾಯಿಂಟ್ ಗಳಿಸಿದ್ದವು.  ಕೆರಿಬಿಯನ್ ತಂಡವು ಅಷ್ಟೇ ಪಾಯಿಂಟ್‌ಗಳಲ್ಲಿ ಉಳಿದಿದ್ದರೆ, ಈ ಗೆಲುವಿನಿಂದ  ಬಾಂಗ್ಲಾದೇಶವು 91ಕ್ಕೆ ಜಿಗಿದಿದೆ. 
 
 ಟೀಂ ಇಂಡಿಯಾ ಕಡೆ ವೇಗಿಗಳಾದ ಭುವನೇಶ್ವರ್ ಕುಮಾರ್, ಉಮೇಶ್ ಯಾದವ್ ಮತ್ತು ಮೋಹಿತ್ ಶರ್ಮಾ ವಿಕೆಟ್ ಗಳಿಸಿದ್ದರೂ ರನ್ ಹರಿವನ್ನು ತಡೆಯಲು ವಿಫಲರಾದರು. ಸರಣಿಯಲ್ಲಿ ಭಾರತ ಜೀವಂತವಾಗಿ ಉಳಿಯಬೇಕಾದರೆ ವೇಗಿತ್ರಯರು ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ.
 
ಓಪನರ್ ರೋಹಿತ್ ಮತ್ತು ಶಿಖರ್ ಧವನ್ ಅವರ 95 ರನ್ ಜೊತೆಯಾಟ  ಮತ್ತು ಸುರೇಶ್ ರೈನಾ ಅವರ ಇನ್ನಿಂಗ್ಸ್ ಕೊನೆಯಲ್ಲಿ ಅಬ್ಬರದ ಆಟ ಹೊರತುಪಡಿಸಿ ಭಾರತದ ಬ್ಯಾಟಿಂಗ್ ಪ್ರದರ್ಶನ ಅಷ್ಟೊಂದು ಉತ್ತಮವಾಗಿರಲಿಲ್ಲ.  ವಿರಾಟ್ ಕೊಹ್ಲಿ ಹಿಂದಿ ಮೂರು ಏಕ ದಿನ ಪಂದ್ಯಗಳಲ್ಲಿ 3, 1,1 ಸ್ಕೋರ್ ಮಾಡಿದ್ದು ಎರಡನೇ ಏಕದಿನದಲ್ಲಿ ರನ್ ಸ್ಕೋರ್ ಮಾಡುವ ತವಕದಲ್ಲಿದ್ದಾರೆ.  ಟೀಂ ಇಂಡಿಯಾ ಎದುರಾಳಿಗಳು ತಮ್ಮ ಹೋಮ್ ವರ್ಕ್ ಚೆನ್ನಾಗಿ ಟೀಂ ಇಂಡಿಯಾ ಎದುರಾಳಿಗಳು ತಮ್ಮ ಹೋಮ್ ವರ್ಕ್ ಚೆನ್ನಾಗಿ ನಿರ್ವಹಿಸಿದ್ದು ಸಾಬೀತಾಗಿದ್ದು, ಇನ್ನೊಂದು ಉತ್ತಮ ಪ್ರದರ್ಶನ ನೀಡುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು 2-0ಯಿಂದ ಗೆದ್ದುಕೊಳ್ಳಲು ಕಾತುರರಾಗಿದ್ದಾರೆ. 

ವೆಬ್ದುನಿಯಾವನ್ನು ಓದಿ