ಕೊನೆಗೂ ಡಿಆರ್ ಎಸ್ ಪದ್ಧತಿಗೆ ಒಪ್ಪಿದ ಬಿಸಿಸಿಐ

ಶುಕ್ರವಾರ, 21 ಅಕ್ಟೋಬರ್ 2016 (13:58 IST)
ನವದೆಹಲಿ:  ಇಷ್ಟು ದಿನ ತಾಂತ್ರಿಕ ದೋಷದ ನೆಪವೊಡ್ಡಿ ತಾನಾಡುವ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಡಿಆರ್ ಎಸ್ ಪದ್ಧತಿ ಅಳವಡಿಸಲು ವಿರೋಧಿಸುತ್ತಲೇ ಬಂದಿದ್ದ ಬಿಸಿಸಿಐ ಮುಂಬರುವ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಪ್ರಾಯೋಗಿಕವಾಗಿ ಇದನ್ನು ಜಾರಿಗೆ ತರಲು ಒಪ್ಪಿದೆ.

“ನವಂಬರ್ 9 ರಿಂದ ಆರಂಭವಾಗುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪ್ರಾಯೋಗಿಕವಾಗಿ ಡಿಆರ್ ಎಸ್ ವ್ಯವಸ್ಥೆಯನ್ನು ಜಾರಿಗೊಳಿಸಲಿದ್ದೇವೆ. ಅದರಲ್ಲಿರುವ ಲೋಪದೋಷಗಳು ಸರಿಯಾಗಿವೆಯೇ ಎಂದು ಪರೀಕ್ಷಿಸಲಿದ್ದೇವೆ” ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.

ಈ ಹಿಂದೆ ಮಹೇಂದ್ರ ಸಿಂಗ್ ಧೋನಿ ನಾಯಕರಾಗಿದ್ದಾಗ ಈ ವ್ಯವಸ್ಥೆಯನ್ನು ವಿರೋಧಿಸುತ್ತಲೇ ಬಂದಿದ್ದರು. ಆದರೆ ಹೊಸ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ಅನಿಲ್ ಕುಂಬ್ಳೆ ಪ್ರಾಯೋಗಿಕವಾಗಿ ಇದನ್ನು ಜಾರಿಗೊಳಿಸುವತ್ತ ಒಲವು ಹೊಂದಿದ್ದಾರೆ.

ಐಸಿಸಿ ಕ್ರಿಕೆಟ್ ಸಮಿತಿ ಮುಖ್ಯಸ್ಥರಾಗಿರುವ ಅನಿಲ್ ಕುಂಬ್ಳೆ ಕಳೆದ ವರ್ಷ ಈ ವ್ಯವಸ್ಥೆಯಲ್ಲಿರುವ ಲೋಪ ದೋಷಗಳನ್ನು ಸರಿಪಡಿಸಲು ಕೈಗೊಂಡಿರುವ ವ್ಯವಸ್ಥೆಗಳ ಕುರಿತು ತಿಳಿದುಕೊಳ್ಳಲು ಎಂಐಟಿ ಪ್ರಯೋಗಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು.

2008 ರಲ್ಲಿ ಕೊನೆಯ ಬಾರಿ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾರತ ಡಿಆರ್ ಎಸ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ