IND vs ENG: ಕೊಹ್ಲಿ, ರೋಹಿತ್ ಕೊರತೆ ಸ್ವಲ್ಪವೂ ಕಾಡದಂತೆ ನೋಡಿಕೊಂಡ ಯುವ ಬ್ಯಾಟಿಗರು
ಇಂದು ಟಾಸ್ ಸೋತು ಮೊದಲು ಬ್ಯಾಟಿಂಗ್ ಗಿಳಿಸಲ್ಪಟ್ಟ ಟೀಂ ಇಂಡಿಯಾಗೆ ಕೆಎಲ್ ರಾಹುಲ್ ಯಶಸ್ವೀ ಜೈಸ್ವಾಲ್ ಉತ್ತಮ ಆರಂಭ ನೀಡಿದರು. ಆದರೆ ಲಯದಲ್ಲಿದ್ದ ರಾಹುಲ್ ಆಫ್ ಸ್ಟಂಪ್ ಆಚೆ ಹೋಗುತ್ತಿದ್ದ ಚೆಂಡು ಕೆಣಕಲು ಹೋಗಿ 42 ರನ್ ಗಳಿಗೆ ಔಟಾದರು. ನಂತರ ಬಂದ ಸಾಯಿ ಸುದರ್ಶನ್ ಕೂಡಾ 4 ಎಸೆತ ಎದುರಿಸಿ ಶೂನ್ಯಕ್ಕೆ ನಿರ್ಗಮಿಸಿದಾಗ ಭಾರತ ಕೊಂಚ ಒತ್ತಡಕ್ಕೆ ಸಿಲುಕಿತ್ತು.
ಆದರೆ ಇನ್ನೊಂದೆಡೆ ಬಂಡೆಯಂತೆ ನಿಂತು ಆಡಿದ ಯಶಸ್ವಿ ಜೈಸ್ವಾಲ್ ಭರ್ಜರಿ ಶತಕ ಸಿಡಿಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಮತ್ತೊಮ್ಮೆ ಅವರು ತಮ್ಮ ಸಾಮರ್ಥ್ಯ ಸಾಬೀತುಪಡಿಸಿದರು. ಇದೀಗ ಅವರು 155 ಎಸೆತಗಳಿಂದ ಭರ್ತಿ 100 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
ಇನ್ನೊಂದೆಡೆ ಕೊಂಚ ಬಿರುಸಿನ ಆಟಕ್ಕೆ ಕೈ ಹಾಕಿದ ಕ್ಯಾಪ್ಟನ್ ಶುಬ್ಮನ್ ಗಿಲ್ 58 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಭೋಜನ ವಿರಾಮದ ಬಳಿಕ ಈ ಜೋಡಿ ಮುರಿಯದ ಮೂರನೇ ವಿಕೆಟ್ ಗೆ 123 ರನ್ ಗಳ ಜೊತೆಯಾಟವಾಡಿದೆ. ಭಾರತ ಇದೀಗ ಚಹಾ ವಿರಾಮದ ವೇಳೆಗೆ 2 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿ ಸುಸ್ಥಿತಿಯಲ್ಲಿದೆ.