ಮತ್ತೊಂದು ಕಾನೂನು ಸಮರಕ್ಕೆ ತೆರೆಮರೆಯಲ್ಲಿ ಸಜ್ಜಾಗುತ್ತಿರುವ ಬಿಸಿಸಿಐ ಪದಚ್ಯುತರು
ಮಂಗಳವಾರ, 17 ಜನವರಿ 2017 (14:16 IST)
ಮುಂಬೈ: ಲೋಧಾ ಸಮಿತಿ ವರದಿ ಆಧರಿಸಿ ಸುಪ್ರೀಂ ಕೋರ್ಟ್ ನಿಂದ ವಜಾಗೊಂದು ಬಿಸಿಸಿಐನ ದೊಡ್ಡ ತಲೆಗಳೆಲ್ಲಾ ಈಗ ಒಂದಾಗಿದೆ. ಅನರ್ಹ ಆಡಳಿತಾಧಿಕಾರಿಗಳೆಲ್ಲಾ ಮತ್ತೆ ಬಿಸಿಸಿಐ ಚುಕ್ಕಾಣಿ ಹಿಡಿಯಲು ಕಾನೂನು ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.
ಕಾನೂನಿನಲ್ಲಿ ಸಾಧ್ಯವಿರುವ ಯಾವುದಾದರೂ ದಾರಿ ಹುಡುಕಿ ಲೋಧಾ ಸಮಿತಿ ವರದಿಯನ್ನು ಪ್ರಶ್ನಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ಜನವರಿ 19 ರಂದು ಸುಪ್ರೀಂ ಕೋರ್ಟ್ ಬಿಸಿಸಿಐಗೆ ಹೊಸ ಪದಾಧಿಕಾರಿಗಳನ್ನು ನೇಮಿಸಲಿದೆ. ಇದರೊಳಗಾಗಿ ಲೋಧಾ ಸಮಿತಿ ವರದಿ ಜಾರಿಗೆ ತಡೆಯೊಡ್ಡುವ ದಾರಿಗಳ ಕುರಿತು ಕೆಲವು ರಾಜ್ಯ ಕ್ರಿಕೆಟ್ ಸಂಸ್ಥೆಗಳು ಗಂಭೀರ ಸಮಾಲೋಚನೆ ನಡೆಸುತ್ತಿವೆ ಎನ್ನಲಾಗಿದೆ.
ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಲೋಧಾ ಸಮಿತಿ ಇನ್ನು ಮುಂದೆ ತಾನು ನೀಡಿದ ಆದೇಶವನ್ನು ಪರಿಪಾಲಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ನಿರ್ದೇಶಿಸಿತ್ತು. ಅದಾಗ್ಯೂ ಲೋಧಾ ಸಮಿತಿ ಭಾರತ ಜ್ಯೂನಿಯರ್ ತಂಡದ ಆಯ್ಕೆಗಾರರ ಸಮಿತಿಯನ್ನು ಮೂರು ಸದಸ್ಯರ ತಂಡವಾಗಿಸಲು ಇಬ್ಬರನ್ನು ಪದಚ್ಯುತಗೊಳಿಸಿರುವುದನ್ನು ಪದಚ್ಯುತರು ಪ್ರಶ್ನಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದ್ಯಾವುದೂ ಲೋಧಾ ಸಮಿತಿ ಮಾಡಲು ನ್ಯಾಯಾಲಯ ಸೂಚಿಸಿರಲಿಲ್ಲ ಎನ್ನುವುದು ಅವರ ವಾದ.
ಇದೆಲ್ಲಾ ಅಂಶಗಳನ್ನಿಟ್ಟುಕೊಂಡು ಲೋಧಾ ಸಮಿತಿಯ ಸಲಹೆಗಳನ್ನು ಪ್ರಶ್ನಿಸಿ ಹೊಸದಾಗಿ ನ್ಯಾಯಾಲಯದಲ್ಲಿ ಪ್ರಕರಣವನ್ನು ತೆರೆಯಲು ಅನರ್ಹರು ಜಾಲ ಹೂಡುತ್ತಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ