ಉಳ್ಳವರಲ್ಲಿ ಅನಿಲ್ ಕುಂಬ್ಳೆಯೇ ಉತ್ತಮ ಎಂದು ಮನಗಂಡಿತೇ ಬಿಸಿಸಿಐ?!
ಶುಕ್ರವಾರ, 9 ಜೂನ್ 2017 (09:06 IST)
ಮುಂಬೈ: ಭಾರತ ಕ್ರಿಕೆಟ್ ತಂಡದ ಮುಂದಿನ ಕೋಚ್ ಯಾರು ಎಂಬುದು ಇದೀಗ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿದೆ. ಮೂಲಗಳ ಪ್ರಕಾರ ಕುಂಬ್ಳೆಯನ್ನೇ ಮುಂದುವರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಚಾಂಪಿಯನ್ಸ್ ಟ್ರೋಫಿ ಮುಗಿದ ತಕ್ಷಣ ಅನಿಲ್ ಕುಂಬ್ಳೆ ಸ್ಥಾನಕ್ಕೆ ಬೇರೆಯವರನ್ನು ಕರೆ ತರಲಾಗುವುದು ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ ಬಿಸಿಸಿಐ ಕಾರ್ಯನಿರ್ವಾಹಕ ಅಧ್ಯಕ್ಷ ಸಿ ಕೆ ಖನ್ನಾ ವೆಸ್ಟ್ ಇಂಡೀಸ್ ಪ್ರವಾಸ ಮುಗಿಯುವವರೆಗೆ ಕೋಚ್ ಆಯ್ಕೆ ಪ್ರಕ್ರಿಯೆ ತಡೆಹಿಡಿಯಲಿ ಎಂದು ಕಾರ್ಯದರ್ಶಿ ಅಮಿತಾಬ್ ಚೌದರಿಗೆ ಪತ್ರ ಬರೆದಿದ್ದಾರೆಂದು ವರದಿಯಾಗಿವೆ.
ಚಾಂಪಿಯನ್ಸ್ ಟ್ರೋಫಿ ಮುಗಿದ ತಕ್ಷಣ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸ ಮಾಡಲಿದೆ. ಹಾಗಾಗಿ ಅಲ್ಲಿಯವರೆಗೂ ಕುಂಬ್ಳೆಯನ್ನು ಮುಂದುವರಿಸುವಂತೆ ಪತ್ರದಲ್ಲಿ ಸಲಹೆ ನೀಡಲಾಗಿದೆ ಎನ್ನಲಾಗಿದೆ. ಆದರೆ ಇದಕ್ಕೆಲ್ಲಾ ಕ್ರಿಕೆಟ್ ಆಡಳಿತ ಮಂಡಳಿ ಒಪ್ಪಿಗೆ ಸಿಗಬೇಕಿದೆ.
ಅನಿಲ್ ಕುಂಬ್ಳೆಯನ್ನೇ ಮುಂದುವರಿಸಬೇಕೇ ಅಥವಾ ಹೊಸದಾಗಿ ನೇಮಕ ಮಾಡುವ ಕೋಚ್ ಗೆ 2019 ರವರೆಗೆ ಗುತ್ತಿಗೆ ನೀಡಬೇಕೇ ಎಂಬ ಬಗ್ಗೆ ಜೂನ್ ಅಂತ್ಯಕ್ಕೆ ನಡೆಯಲಿರುವ ಬಿಸಿಸಿಐ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಸದ್ಯಕ್ಕೆ ಟೀಂ ಇಂಡಿಯಾ ಪ್ರಮುಖ ಟೂರ್ನಿಯಾಡುತ್ತಿರುವಾಗ ತರಾತುರಿಯಲ್ಲಿ ಕೋಚ್ ಆಯ್ಕೆ ಮಾಡುವುದು ಬೇಡ ಎಂಬ ತೀರ್ಮಾನಕ್ಕೆ ಬಿಸಿಸಿಐ ಬಂದಿದೆ ಎನ್ನಲಾಗಿದೆ.