ರೋಹಿತ್ ಶರ್ಮಾಗೆ ಅರ್ಜುನ ಪ್ರಶಸ್ತಿಗೆ ಬಿಸಿಸಿಐ ಶಿಫಾರಸು

ಸೋಮವಾರ, 27 ಏಪ್ರಿಲ್ 2015 (13:08 IST)
ಬಿಸಿಸಿಐ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರಿಗೆ ಈ ವರ್ಷದ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ.  ಬಿಸಿಸಿಐ ಕಾರ್ಯಕಾರಿ ಸಮಿತಿ ರೋಹಿತ್ ಶರ್ಮಾ ಅವರಿಗೆ 2015ನೇ ಸಾಲಿನ ಅರ್ಜುನ ಪ್ರಶಸ್ತಿ ನೀಡಲು ಶಿಫಾರಸು ಮಾಡಿತು ಎಂದು ಅದರ ಕಾರ್ಯದರ್ಶಿ ಅನುರಾಗ್ ಠಾಕುಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 
 
 ಎಡೆನ್ ಗಾರ್ಡನ್ಸ್‌ನಲ್ಲಿ ಶ್ರೀಲಂಕಾ ವಿರುದ್ಧ ಸ್ಫೋಟಕ 264 ರನ್ ಬಾರಿಸುವ ಮೂಲಕ ರೋಹಿತ್  ಏಕ ದಿನ ಪಂದ್ಯದಲ್ಲಿ ಅತ್ಯಧಿಕ ಮೊತ್ತದ ವಿಶ್ವದಾಖಲೆಯನ್ನು ನಿರ್ಮಿಸಿದ್ದು, ಇಲ್ಲಿಯವರೆಗೆ ಏಳು ಏಕ ದಿನ ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ್ದಾರೆ. 
 
ವಿಶ್ವಕಪ್‌ನಲ್ಲಿ ಕಳೆದ ತಿಂಗಳು ಬಾಂಗ್ಲಾದೇಶದ ವಿರುದ್ಧ 137 ಎಸೆತಗಳಲ್ಲಿ 126 ರನ್ ಬಾರಿಸಿದಾಗ ಅವರು ಐತಿಹಾಸಿಕ ಎಂಸಿಜಿಯಲ್ಲಿ ವಿದೇಶಿ ಆಟಗಾರನಾಗಿ ಎರಡು ಶತಕಗಳನ್ನು ಬಾರಿಸಿದ ಮೂರನೇ ಆಟಗಾರನಾಗಿ ಇಂಗ್ಲಿಷ್ ಬ್ಯಾಟ್ಸ್‌ಮನ್ ಡೇವಿಡ್ ಗೋವರ್ ಮತ್ತು ವೆಸ್ಟ್ ಇಂಡೀಸ್ ಆಟಗಾರ  ವಿವಿಯನ್ ರಿಚರ್ಡ್ಸ್ ಸಾಲಿಗೆ ಸೇರಿದ್ದಾರೆ.
 
2006ರಲ್ಲಿ ಅಂಡರ್ 19 ವಿಶ್ವಕಪ್ ವೇಳೆ 3ನೇ ಕ್ರಮಾಂಕದಲ್ಲಿ ಶ್ರೇಷ್ಟ ಬ್ಯಾಟಿಂಗ್ ಮೂಲಕ ಅವರು ಗಮನ ಸೆಳೆದಿದ್ದರು. ಇದರಿಂದ ಅವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲಾಗಿತ್ತಾದರೂ, 2013ರವರೆಗೆ ಆಟದಲ್ಲಿ ಸ್ಥಿರಪ್ರದರ್ಶನದ ಕೊರತೆಯಿಂದ ತಂಡದಿಂದ ಹೊರಗುಳಿದಿದ್ದರು. 
 
ಕಾರ್ಯಕಾರಿ ಸಮಿತಿಯು ಅಗಲಿದ ಕ್ರಿಕೆಟ್ ಆಟಗಾರ ಬಂಗಾಳದ ಅಂಕಿತ್ ಕೇಶ್ರಿ, ಜಾರ್ಖಂಡ್ ಗೌರವ್ ಕುಮಾರ್ ಮತ್ತು ಭೂಕಂಪದಲ್ಲಿ ಮೃತಪಟ್ಟ ದುರದೃಷ್ಟಕರ ದುರ್ದೈವಿಗಳಿಗೆ ಸಂತಾಪ ಸೂಚಿಸಿದೆ. 

ವೆಬ್ದುನಿಯಾವನ್ನು ಓದಿ