ಶಶಾಂಕ್ ಮನೋಹರ್‌ಗೆ ಬಿಸಿಸಿಐ ಅಧ್ಯಕ್ಷ ಪಟ್ಟ ಬಹುತೇಕ ಖಚಿತ

ಮಂಗಳವಾರ, 29 ಸೆಪ್ಟಂಬರ್ 2015 (16:28 IST)
ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾದ ಬಿಸಿಸಿಐ ಅಕ್ಟೋಬರ್ 4 ರಂದು ವಿಶೇಷ ಸಾಮಾನ್ಯ ಸಭೆ ಕರೆದಿದ್ದು, ನೂತನ ಅಧ್ಯಕ್ಷರನ್ನು ನೇಮಕ ಮಾಡಲಿದೆ. ನಾಗ್ಪುರ್ ಮೂಲದ ವಕೀಲರಾದ ಶಶಾಂಕ್ ಮನೋಹರ್ ಸರ್ವ ಸಮ್ಮತ ಅಧ್ಯಕ್ಷ ಹುದ್ದೆಯ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. 
 
ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಮಾತನಾಡಿ, ಮುಂಬೈಯಲ್ಲಿ ಸಭೆ ನಡೆಯಲಿದ್ದು ಅಧ್ಯಕ್ಷ ಹುದ್ದೆಗಾಗಿ ಸ್ಪರ್ಧಿಸುವ ಅಭ್ಯರ್ಥಿಗಳ ನಾಮಪರಿಶೀಲನೆ ಅಕ್ಟೋಬರ್ 3 ರಂದು ನಡೆಯಲಿದೆ ಎಂದು ತಿಳಿಸಿದ್ದಾರೆ.
 
ಶಶಾಂಕ್ ಮನೋಹರ್ ನಮ್ಮ ಸರ್ವಸಮ್ಮತ ಅಭ್ಯರ್ಥಿಯಾಗಿದ್ದಾರೆ. ಒಂದು ವೇಳೆ ಚುನಾವಣೆ ನಡೆದಲ್ಲಿ ಮಾಜಿ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಬಂದು ಬಿಸಿಸಿಐ ಸಭೆಯಲ್ಲಿ ಮತ ನೀಡಲಿ ಎಂದು ಹೇಳಿದ್ದಾರೆ. 
 
ಮಾಜಿ ಬಿಸಿಸಿಐ ಅಧ್ಯಕ್ಷ ಎನ್‌.ಶ್ರೀನಿವಾಸನ್ ಬಿಸಿಸಿಐ ಸಭೆಯಲ್ಲಿ ಪಾಲ್ಗೊಳ್ಳುವ ಅರ್ಹತೆ ಕುರಿತಂತೆ ಕೋರ್ಟ್ ಆಕ್ಟೋಬರ್ 5 ರಂದು ತೀರ್ಪು ನೀಡಲಿದೆ. ಆದರೆ, ಮತದಾನದಲ್ಲಿ ಪಾಲ್ಗೊಳ್ಳುವುದಕ್ಕೆ ನಿಷೇಧ ಹೇರಲಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.
 
ಕಳೆದ 2008ರಿಂದ 2011 ರವರೆಗೆ ಬಿಸಿಸಿಐ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಶಶಾಂಕ್ ಮನೋಹರ್ ಆರಂಭದಲ್ಲಿ ಅಧ್ಯಕ್ಷರಾಗಲು ನಿರಾಕರಿಸಿದ್ದರೂ ನಂತರ ಸಮ್ಮತಿ ಸೂಚಿಸಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
 
ಬಿಸಿಸಿಐ ಅಧ್ಯಕ್ಷರಾಗಿದ್ದ ಜಗನ್ಮೋಹನ್ ದಾಲ್ಮಿಯಾ ಇಹಲೋಕ ತ್ಯಜಿಸಿದ್ದರಿಂದ ಬಿಸಿಸಿಐ ಹುದ್ದೆ ಖಾಲಿಯಾಗಿತ್ತು. 
 
ಕೋಲ್ಕತಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಸೌರವ್ ಗಂಗೂಲಿಯವರನ್ನು ನೇಮಕ ಮಾಡಲಾಗಿದ್ದು, ಅವರು ಮನೋಹರ್ ಪರವಾಗಿ ಮತ ಚಲಾಯಿಸಲಿದ್ದಾರೆ ಎನ್ನಲಾಗಿದೆ.
 

ವೆಬ್ದುನಿಯಾವನ್ನು ಓದಿ