ರವಿಚಂದ್ರನ್ ಅಶ್ವಿನ್ ಮೋಡಿಗೆ ಮರುಳಾಗದವರುಂಟೇ?

ಗುರುವಾರ, 8 ಡಿಸೆಂಬರ್ 2016 (18:23 IST)
ಮುಂಬೈ: ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ದಿನದಂತ್ಯಕ್ಕೆ288 ರನ್ ಗಳಿಗೆ  ಇಂಗ್ಲೆಂಡ್ ನ ಐದು ವಿಕೆಟ್  ಉರುಳಿದೆ. ಈ ಐದು ವಿಕೆಟ್ ಗಳಲ್ಲಿ ನಾಲ್ಕು ವಿಕೆಟ್ ರವಿಚಂದ್ರನ್ ಅಶ್ವಿನ್ ಪಾಲಾಗಿದೆ ಎಂಬುದೇ ವಿಶೇಷ.

ಪ್ರತೀ ಪಂದ್ಯದಲ್ಲಿ ಕನಿಷ್ಠ ಒಂದು ಇನಿಂಗ್ಸ್ ನಲ್ಲಾದರೂ ಐದು ವಿಕೆಟ್ ಗೊಂಚಲು ಪಡೆದೇ ತೀರುತ್ತೇನೆ ಎಂದು ಅಶ್ವಿನ್ ಶಪಥ ಮಾಡಿಕೊಂಡಂತಿದೆ. ಅದೇ ರೀತಿ ನಡೆದುಕೊಳ್ಳುತ್ತಿದ್ದಾರೆ ಕೂಡಾ. ಇಂಗ್ಲೆಂಡ್ ವಿರುದ್ಧ ಇದುವರೆಗೆ ನಡೆದ ಮೂರೂ ಪಂದ್ಯಗಳಲ್ಲಿ ಅವರು ಐದು ವಿಕೆಟ್ ಗೊಂಚಲು ಪಡೆದಿದ್ದಾರೆ. ಹೀಗೇ ಮುಂದುವರಿದರೆ ಅವರು ಬೇಗನೇ ಅತೀ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಕ್ರಿಕೆಟಿಗನಾಗುವುದರಲ್ಲಿ ಸಂಶಯವಿಲ್ಲ.

ಉಳಿದೊಂದು ವಿಕೆಟ್ ರವೀಂದ್ರ ಜಡೇಜಾ ಪಾಲಾಗಿದೆ. ಅಲ್ಲಿಗೆ ಪಿಚ್ ಸಂಪೂರ್ಣ ಬೌಲರ್ ಸ್ನೇಹಿಯಾಗುತ್ತಿರುವುದು ಖಚಿತವಾಗಿದೆ. ಆದರೂ ಭಾರತೀಯ ಬೌಲರ್ ಗಳ ತೂತು ಕೈಯ ಪರಿಣಾಮವಾಗಿ ಇಂಗ್ಲೆಂಡ್ ಆರಂಭಿಕ ಕೀಟನ್ ಜೆನ್ನಿಂಗ್ಸ್ ಅಮೋಘ 112 ರನ್ ಗಳಿಸಿದರು. ಕಳೆದ ಪಂದ್ಯಗಳಲ್ಲಿ ಅಪಾಯಕಾರಿಯಾಗಿದ್ದ ಕೀಪರ್ ಬೇರ್ ಸ್ಟೋ ಈಗಾಗಲೇ ಪೆವಿಲಿಯನ್ ಗೆ ಮರಳಿದ್ದಾರೆ.

ಆದರೆ ಇಂಗ್ಲೆಂಡ್ ಒಂದು ಉತ್ತಮ ಮೊತ್ತ ಕಲೆ ಹಾಕಿದ್ದು, ಇನ್ನೂ ಐದು ವಿಕೆಗಳು ಸುರಕ್ಷಿತವಾಗಿರುವುದರಿಂದ 350 ಪ್ಲಸ್ ರನ್ ಗಳಿಸುವುದು ನಿಶ್ಚಿತ. ಹೀಗಾದರೆ ಈ ಟರ್ನಿಂಗ್ ಪಿಚ್ ನಲ್ಲಿ ಭಾರತೀಯ ಬ್ಯಾಟ್ಸ್ ಮನ್ ಗಳಿಗೆ ರನ್ ಚೇಸ್ ಮಾಡುವುದು ಕಷ್ಟವಾಗಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ