ಚೆನ್ನೈ: ಭಾರತ ಮತ್ತು ಇಂಗ್ಲೆಂಡ್ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಪಿಚ್ ಬಗ್ಗೆ ಇಂಗ್ಲೆಂಡ್ ಸಮರ್ಥಕರಿಂದ ಸಾಕಷ್ಟು ಟೀಕೆ ಕೇಳಿಬಂದಿದೆ. ಆದರೆ ಮೂರು ದಿನದಾಟ ಮುಗಿಯುವಷ್ಟರಲ್ಲಿ ಈ ಪಿಚ್ ನಲ್ಲಿ ಹೇಗೆ ಆಡಬೇಕೆಂದು ಆಟಗಾರರಿಗೆ ಅರ್ಥವಾಗಿದೆ.
ಪುಟಿದೇಳುತ್ತಿರುವ ಪಿಚ್ ನಲ್ಲಿ ಆಡುವುದು ತುಂಬಾ ಕಷ್ಟ. ಹೀಗಾಗಿ ಇದು ಆತುರಗಾರರಿಗೆ ಹೇಳಿ ಮಾಡಿಸಿದ ಪಿಚ್ ಅಲ್ಲ. ನಿಂತು ಆಡಿ, ಪಿಚ್ ನ ಹದವರಿತು ಅದಕ್ಕೆ ತಕ್ಕಂತೆ ಆಡಿದರೆ ಮಾತ್ರ ಇಲ್ಲಿ ಯಶಸ್ಸು ಸಿಗಬಹುದು. ಅದಕ್ಕೆ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ಕಳೆಯಬೇಕು. ಹೀಗಾಗಿಯೇ ರಿಷಬ್ ಪಂತ್ ರಂತಹ ಹೊಡೆಬಡಿಯ ಆಟಗಾರರು ದ್ವಿತೀಯ ಇನಿಂಗ್ಸ್ ನಲ್ಲಿ ವೈಫಲ್ಯ ಕಂಡಿದ್ದಾರೆ.