ಭಾರತ-ಬಾಂಗ್ಲಾ ಟೆಸ್ಟ್: ‘ನಿಧಾನಿ’ ಪೂಜಾರ ‘ಅಗ್ರೆಸಿವ್’ ಆದಾಗ..!

ಗುರುವಾರ, 14 ನವೆಂಬರ್ 2019 (17:04 IST)
ಇಂಧೋರ್: ಚೇತೇಶ್ವರ ಪೂಜಾರ ಎಂದರೆ ಭಾರತದ ಮತ್ತೊಬ್ಬ ರಾಹುಲ್ ದ್ರಾವಿಡ್ ಎಂದೇ ಕರೆಯಿಸಿಕೊಳ್ಳುವ ಆಟಗಾರ. ದ್ರಾವಿಡ್ ರಂತೆ ಟೆಸ್ಟ್ ಸ್ಪೆಷಲಿಸ್ಟ್ ಆಟಗಾರರಾಗಿರುವ ಪೂಜಾರ ತಾಳ್ಮೆಯಿಂದ ಇನಿಂಗ್ಸ್ ಕಟ್ಟುತ್ತಾರೆ. ಆದರೆ ಇಂದು ಮಾತ್ರ ಅವರ ಬ್ಯಾಟಿಂಗ್ ಸಂಪೂರ್ಣ ಬದಲಾಗಿತ್ತು.


ಕಳೆದ ಕೆಲವು ದಿನಗಳಿಂದ ಪೂಜಾರ ಹೇಳಿಕೊಳ್ಳುವಂತಹ ರನ್ ಗಳಿಸಿಲ್ಲ. ಫಾರ್ಮ್ ಕೊರತೆಯಿಂದ ಬಳಲುತ್ತಿರುವ ಪೂಜಾರ ಹೇಗಾದರೂ ಮಾಡಿ ಫಾರ್ಮ್ ಗೆ ಮರಳಲೇಬೇಕು ಎಂಬ ತುಡಿತದಲ್ಲಿದ್ದಾರೆ. ಇದಕ್ಕಾಗಿ ತಮ್ಮ ಬ್ಯಾಟಿಂಗ್ ಶೈಲಿಯನ್ನೇ ಬದಲಾಯಿಸಿಕೊಂಡಂತಿದೆ.

ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಭಾರತ ಮೊದಲ ಇನಿಂಗ್ಸ್ ನಲ್ಲಿ 1 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿದೆ. ಬಾಂಗ್ಲಾ ಮೊದಲ ಇನಿಂಗ್ಸ್ ನಲ್ಲಿ ಕೇವಲ 150 ರನ್ ಗಳಿಗೆ ಆಲೌಟ್ ಆಗಿತ್ತು. ಈ ಮೊತ್ತ ಬೆನ್ನತ್ತಿದ ಭಾರತ ಆರಂಭದಲ್ಲೇ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು.

ಈ ಸಂದರ್ಭದಲ್ಲಿ ಕನ್ನಡಿಗ ಮಯಾಂಕ್ ಅಗರ್ವಾಲ್ ಜತೆಗೂಡಿದ ಪೂಜಾರ ಟೀಂ ಇಂಡಿಯಾಕ್ಕೆ ಚೇತರಿಕೆ ನೀಡಿದರು. ವಿಶೇಷವೆಂದರೆ ಪೂಜಾರ ಕೊಂಚ ಆಕ್ರಮಣಕಾರಿ ಹೊಡೆತಗಳು, ಆಟ ಆಡುವ ಮೂಲಕ ಗಮನ ಸೆಳೆದರು. ಅವರಿಗೆ ಹೋಲಿಸಿದರೆ ಮಯಾಂಕ್ ತೀರಾ ನಿಧಾನಿಯಾಗಿದ್ದರು! ದಿನದಂತ್ಯಕ್ಕೆ ಪೂಜಾರ 61 ಎಸೆತಗಳಲ್ಲಿ 43 ರನ್ ಗಳಿಸಿದ್ದರೆ, ಮಯಾಂಕ್ 81 ಎಸೆತಗಳಲ್ಲಿ 37 ರನ್ ಗಳಿಸಿದ್ದರು. ಭಾರತ ಇನ್ನೂ 64 ರನ್ ಗಳ ಹಿನ್ನಡೆಯಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ