ಇಂಗ್ಲೆಂಡ್ ವಿರುದ್ಧ ಮೂರನೇ ಟೆಸ್ಟ್ ನಲ್ಲಿ ಚೇತೇಶ್ವರ ಪೂಜಾರ! ಆದರೆ ಒಂದು ಟ್ವಿಸ್ಟ್

Krishnaveni K

ಸೋಮವಾರ, 12 ಫೆಬ್ರವರಿ 2024 (12:13 IST)
ರಾಜ್ ಕೋಟ್: ಇಂಗ್ಲೆಂಡ್ ವಿರುದ್ಧ ರಾಜ್ ಕೋಟ್ ಮೈದಾನದಲ್ಲಿ ಫೆಬ್ರವರಿ 15 ರಿಂದ ಆರಂಭವಾಗಲಿರುವ ಮೂರನೇ ಟೆಸ್ಟ್ ಗೆ ಮುನ್ನ ಟೀಂ ಇಂಡಿಯಾ ಹಿರಿಯ ಆಟಗಾರ ಚೇತೇಶ್ವರ ಪೂಜಾರ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಆಟಗಾರನಾಗಿ ಅಲ್ಲ!

ರಾಜ್ ಕೋಟ್ ಪೂಜಾರ ತವರು ನೆಲ. ಭಾರತೀಯ ಕ್ರಿಕೆಟ್ ರಂಗಕ್ಕೆ ಅದರಲ್ಲೂ ಟೆಸ್ಟ್ ಕ್ರಿಕೆಟ್ ಮಾದರಿಯಲ್ಲಿ ಚೇತೇಶ್ವರ ಪೂಜಾರ ಕೊಡುಗೆ ಅಪಾರ. 100 ಟೆಸ್ಟ್ ಪಂದ್ಯಗಳನ್ನು ಆಡಿದ ಕೆಲವೇ ಕೆಲವು ಭಾರತೀಯ ಆಟಗಾರರಲ್ಲಿ ಅವರೂ ಒಬ್ಬರು. ಕಳೆದ ಕೆಲವು ಸಮಯದಿಂದ ಪೂಜಾರಗೆ ಭಾರತ ತಂಡದಲ್ಲಿ ಅವಕಾಶ ಸಿಗುತ್ತಿಲ್ಲ. ಆದರೆ ಅವರ ತವರು ಕ್ರಿಕೆಟ್ ಸಂಸ್ಥೆ ಪೂಜಾರರನ್ನು ಕಡೆಗಣಿಸಿಲ್ಲ.

ಚೇತೇಶ್ವರ ಪೂಜಾರಗೆ ನಡೆಯಲಿದೆ ತವರಿನ ಸನ್ಮಾನ
ತವರಿನಲ್ಲಿ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದ ಹಿಂದಿನ ದಿನ ಅಂದರೆ ಫೆಬ್ರವರಿ 14 ರಂದು ರಾಜ್ ಕೋಟ್ ಮೈದಾನದ ಪುನರ್ ನಾಮಕರಣ ಸಮಾರಂಭವಿದೆ. ಇದೇ ಸಂದರ್ಭದಲ್ಲಿ ಪೂಜಾರಗೆ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸನ್ಮಾನ ಮಾಡಲಿದೆ. ಕ್ರಿಕೆಟ್ ರಂಗಕ್ಕೆ ಅವರ ಕೊಡುಗೆಗಾಗಿ ಈ ವಿಶೇಷ ಸನ್ಮಾನ ನಡೆಯಲಿದೆ. ಅವರ ಜೊತೆಗೆ ಇದೇ ರಾಜ್ ಕೋಟ್ ನ ಮತ್ತೊಬ್ಬ ಕ್ರಿಕೆಟಿಗ ರವೀಂದ್ರ ಜಡೇಜಾಗೂ ಸನ್ಮಾನ ನಡೆಯಲಿದೆ. ಜಡೇಜಾ ಈ ಟೆಸ್ಟ್ ಪಂದ್ಯದಲ್ಲಿ ಆಡಲಿದ್ದಾರೆ.

ಸ್ಥಳೀಯ ಆಟಗಾರರಾದ ಪೂಜಾರ ಮತ್ತು ಜಡೇಜಾ ಒಟ್ಟಿಗೇ ಈ ಪಂದ್ಯದಲ್ಲಿ ಆಡಿದ್ದರೆ ಒಳ್ಳೆಯದಿತ್ತು. ಆದರೆ ಪೂಜಾರಗೆ ಅವಕಾಶ ಸಿಕ್ಕಿಲ್ಲ. ಸದ್ಯಕ್ಕೆ ಅವರು ರಣಜಿ ಟ್ರೋಫಿ ಟೂರ್ನಿ ಆಡುತ್ತಿದ್ದು, ಭರ್ಜರಿ ಫಾರ್ಮ್ ನಲ್ಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ