ಕ್ರಿಸ್ ಗೇಲ್‌ಗೆ ಐಪಿಎಲ್ ದಿಗ್ಬಂಧನ ಹಾಕುತ್ತದೆಯೇ?

ಬುಧವಾರ, 25 ಮೇ 2016 (16:30 IST)
ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಈ ಸಲದ ಐಪಿಎಲ್‌ನಲ್ಲಿ ಟಾಪ್ ಫಾರಂನಲ್ಲಿಲ್ಲ. ಆದರೆ ಪಿಚ್ ಒಳಗೆ ಅಷ್ಟೇನೂ ಸುದ್ದಿಯಾಗದಿದ್ದರೂ ಪಿಚ್ ಹೊರಗೆ ವಿವಾದದ ಮೂಲಕ ಸುದ್ದಿಯಾಗಿದ್ದಾರೆ. ಬಿಗ್ ಬ್ಯಾಷ್ ಲೀಗ್‌ ಸಂದರ್ಭದಲ್ಲಿ  ಆಸೀಸ್ ಟಿವಿ ನಿರೂಪಕಿಯ ಜತೆ  ಮಾತನಾಡುತ್ತಾ ಗೇಲ್ ಅನುಚಿತವಾಗಿ ವರ್ತಿಸಿದ್ದರು.
 
 ಇದೇ ರೀತಿ ಗೇಲ್ ಬ್ರಿಟಿಷ್ ಪತ್ರಕರ್ತೆ ಚಾರ್ಲಟ್ ಎಡ್ವರ್ಡ್ಸ್ ಜತೆ ಕೂಡ ಅಶ್ಲೀಲ ಮಾತುಗಳನ್ನು ಆಡಿದ್ದರಿಂದ ಬಿಬಿಎಲ್ ತಂಡ ಮೆಲ್ಬರ್ನ್ ರೆನೆಗೇಡ್ಸ್ ಅವರ ಗುತ್ತಿಗೆಯನ್ನು ನವೀಕರಿಸದಿರಲು ನಿರ್ಧರಿಸಿದೆ. 
 
 ಆದರೆ ಈ ದಿಗ್ಬಂಧನ ಅಷ್ಟಕ್ಕೇ ಮುಗಿಯುವುದಿಲ್ಲ. ಇಂಗ್ಲೀಷ್ ಕೌಂಟಿ ತಂಡ ಸಾಮರ್ ಸೆಟ್ ಕೂಡ ಸೂಕ್ಷ್ಮವಾಗಿ ಗಮನಿಸುತ್ತಿದೆ. ಐಪಿಎಲ್ ಅಧ್ಯಕ್ಷ  ರಾಜೀವ್ ಶುಕ್ಲಾ ಕೂಡ ರಾಯಲ್ ಚಾಲೆಂಜರ್ಸ್ ಆಟಗಾರನ ಜತೆ ಈ ವಿಷಯ ಪ್ರಸ್ತಾಪಿಸಿರಬಹುದೆಂದು ಹೇಳಲಾಗುತ್ತಿದೆ. 
 
 ಗೇಲ್ ಚಾರ್ಲಟ್ ಜತೆ ''ತನ್ನ ಬಳಿ ತುಂಬಾ ದೊಡ್ಡ ಬ್ಯಾಟ್ ಇದೆ. ಜಗತ್ತಿನಲ್ಲೇ ದೊಡ್ಡದು. ಅದನ್ನು ನೀನು ಎತ್ತಬಹುದೆಂದು ಭಾವಿಸಿದ್ದೀಯ. ನಿನಗೆ ಎರಡು ಕೈಗಳು ಬೇಕಾಗುತ್ತದೆ''  ಎಂದು ಹೇಳಿದ್ದರು.  ಬಳಿಕ ಅದೆಲ್ಲಾ ತಮಾಷೆಯಾಗಿ ಹೇಳಿದ್ದು ಎಂದು ಸಮಜಾಯಿಷಿ ನೀಡಿದ್ದರು. 
 
 ಅಧಿಕೃತ ದೂರು ಬಂದ ಮೇಲೆ ಬಿಸಿಸಿಐ ಈ ಕುರಿತು ಕ್ರಮ ಕೈಗೊಳ್ಳಬಹುದು. ಈ ಹಂತದಲ್ಲಿ ನಾವು ಐಪಿಎಲ್ ಮುಗಿಯುವುದರತ್ತ ಗಮನಹರಿಸಿದ್ದೇವೆ ಎಂದು ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ ಹೇಳಿದ್ದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ