ಸಂಜು ಸ್ಯಾಮ್ಸನ್ ಗೆ ಸಿಕ್ತು ಕೋಚ್ ಗೌತಮ್ ಗಂಭೀರ್ ಶಹಬ್ಬಾಶ್ ಗಿರಿ

Krishnaveni K

ಶುಕ್ರವಾರ, 27 ಫೆಬ್ರವರಿ 2026 (10:35 IST)
Photo Credit: X
ಚೆನ್ನೈ: ಭಾರತ ಮತ್ತು ಜಿಂಬಾಬ್ವೆ ನಡುವೆ ನಿನ್ನೆ ನಡೆದಿದ್ದ ಟಿ20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಸಂಜು ಸ್ಯಾಮ್ಸನ್ ಗೆ ಕೋಚ್ ಗೌತಮ್ ಗಂಭೀರ್ ಶಹಬ್ಬಾಶ್ ಗಿರಿ ಕೊಟ್ಟಿದ್ದಾರೆ.

ಟಿ20 ವಿಶ್ವಕಪ್ ನಲ್ಲಿ ಸಂಜು ಸ್ಯಾಮ್ಸನ್ ಗೆ ಅವಕಾಶ ಸಿಗುವುದೇ ಕಷ್ಟವಿತ್ತು. ಫಾರ್ಮ್ ಕಳೆದುಕೊಂಡಿದ್ದ ಅವರಿಗೆ ಅವಕಾಶ ನೀಡಲು ಮ್ಯಾನೇಜ್ ಮೆಂಟ್ ಗೆ ಮನಸ್ಸಿರಲಿಲ್ಲ. ಆದರೆ ಆಗಲೇ ಅಭಿಷೇಕ್ ಶರ್ಮಾ ಕೂಡಾ ಫಾರ್ಮ್ ಕಳೆದುಕೊಂಡು ಒದ್ದಾಡುತ್ತಿದ್ದರು ಮತ್ತು ರಿಂಕು ಸಿಂಗ್ ಗೈರಾಗಿದ್ದರು.

ಹೀಗಾಗಿ ಸಂಜುಗೆ ಅನಿವಾರ್ಯವಾಗಿ ಅವಕಾಶ ನೀಡಲಾಯಿತು. ಇದಕ್ಕಾಗಿ ಅವರು ಮೊನ್ನೆಯಿಂದ ಕಠಿಣ ತರಬೇತಿ ನಡೆಸಿದ್ದರು. ಕೊನೆಗೂ ತಮಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ಸಂಜು ಗಳಿಸಿದ್ದು ಕೇವಲ 24 ರನ್ ಗಳಾದರೂ ಇಷ್ಟು ದಿನ ಭಾರತಕ್ಕೆ ಕಾಡುತ್ತಿದ್ದ ಆರಂಭಿಕ ಆಘಾತವನ್ನು ಅವರು ತಪ್ಪಿಸಿದ್ದರು.

ಶುರುವಿನಲ್ಲಿ ಅಭಿಷೇಕ್ ಶರ್ಮಾ ಬದಲು ತಾವೇ ಹೆಚ್ಚು ಬಾಲ್ ಎದುರಿಸಿ ಒತ್ತಡ ಕಡಿಮೆ ಮಾಡಿದರು. ಅಲ್ಲದೆ ಕೇವಲ 15 ಎಸೆತಗಳಿಂದ 2 ಸಿಕ್ಸರ್ ಸಹಿತ 24 ರನ್ ಚಚ್ಚಿದರು. ಅವರ ಬಿರುಗಾಳಿ ಆಟದಿಂದ ಭಾರತ ಭರ್ಜರಿ ಆರಂಭ ಪಡೆಯಿತು. ಅತ್ತ ಇನ್ನೊಂದು ತುದಿಯಲ್ಲಿದ್ದ ಅಭಿಷೇಕ್ ಕೂಡಾ ಆತ್ಮವಿಶ್ವಾಸ ಪಡೆದುಕೊಂಡರು.

ಹೀಗಾಗಿ ಸಂಜುಗೆ ಕೋಚ್ ಗೌತಮ್ ಗಂಭೀರ್ ಡಗ್ ಔಟ್ ನಲ್ಲಿ ಬೆನ್ನು ತಟ್ಟಿದ್ದಾರೆ. ಕೊಟ್ಟ ಕೆಲಸವನ್ನು ಸರಿಯಾಗಿ ನಿಭಾಯಿಸಿದ ಖುಷಿ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಸಂಜು ಮುಂದಿನ ಪಂದ್ಯಗಳಲ್ಲಿ ಇದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ಪ್ರಯತ್ನಿಸಿದರೆ ಭಾರತ ಇನ್ನಷ್ಟು ಸುಭದ್ರ ಸ್ಥಿತಿಗೆ ತಲುಪಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ