ಹರ್ಭಜನ್ ಸಿಂಗ್, ಅಶ್ವಿನ್ ಬೌಲಿಂಗ್ ಶೈಲಿ ಅಕ್ರಮ: ಸಯೀದ್ ಅಜ್ಮಲ್

ಮಂಗಳವಾರ, 3 ನವೆಂಬರ್ 2015 (16:08 IST)
ಭಾರತದ ಹರ್ಭಜನ್ ಸಿಂಗ್ ಮತ್ತು ಅಶ್ವಿನ್ ಬೌಲಿಂಗ್ ಶೈಲಿ ಕಾನೂನುಬಾಹಿರವಾಗಿದ್ದರೂ ಐಸಿಸಿ ಅವರಿಬ್ಬರ ಮೇಲೆ ಕ್ರಮಕೈಗೊಳ್ಳದೇ  ಮೌನವಹಿಸಿದೆ ಎಂದು ಪಾಕಿಸ್ತಾನದ ಆಫ್ ಸ್ಪಿನ್ನರ್ ಸಯೀದ್ ಅಜ್ಮಲ್ ಆರೋಪಿಸಿದ್ದಾರೆ.  ಶಂಕಿತ ಬೌಲಿಂಗ್ ಶೈಲಿಯ ಹಿನ್ನೆಲೆಯಲ್ಲಿ  ಐಸಿಸಿ  ಬೌಲಿಂಗ್‌ನಿಂದ ನಿಷೇಧ ವಿಧಿಸಿದ 38 ವರ್ಷ ವಯಸ್ಸಿನ ಅಜ್ಮಲ್ ಈಗ ತಮ್ಮ ಶೈಲಿಯನ್ನು ಬದಲಿಸಿಕೊಂಡಿದ್ದಾರೆ. ಆದಾಗ್ಯೂ ಅವರು ರಾಷ್ಟ್ರೀಯ ತಂಡದ ಭಾಗವಾಗಿ ಉಳಿದಿಲ್ಲ. 
 
 ಪಾಕಿಸ್ತಾನದ ಸುದ್ದಿ ಚಾನೆಲ್‌ಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಅಜ್ಮಲ್,   15 ಡಿಗ್ರಿ ಬೌಲಿಂಗ್ ಶೈಲಿಯ ಮಿತಿಯನ್ನು ಮೀರಿದ್ದಕ್ಕಾಗಿ ಪಾಕಿಸ್ತಾನಿ ಬೌಲರುಗಳ ಮೇಲೆ ಕ್ರಮ ಕೈಗೊಂಡಿದ್ದನ್ನು ಟೀಕಿಸಿ ಐಸಿಸಿ ಪಕ್ಷಪಾತದಿಂದ ವರ್ತಿಸುತ್ತಿದೆ ಎಂದು ಹೇಳಿದರು.  ನಾನು ಹರ್ಭಜನ್ ಮತ್ತಿತರ ಬೌಲರುಗಳ ಶೈಲಿ ನೋಡುತ್ತಿದ್ದು, ಅವರು ಈಗಲೂ ಕಾನೂನುಬಾಹಿರ ಬೌಲಿಂಗ್ ಮಾಡುತ್ತಿದ್ದು, ಐಸಿಸಿ ಅದನ್ನು ನಿಲ್ಲಿಸುತ್ತಿಲ್ಲ ಎಂದು ದೂರಿದರು. 

 ಹರ್ಭಜನ್ ಮತ್ತು ಅಶ್ವಿನ್ 15 ಡಿಗ್ರಿ ಮಿತಿಯನ್ನು ಮೀರಿ ಬೌಲಿಂಗ್ ಮಾಡುತ್ತಾರೆ. ನಮ್ಮ ಬೌಲರ್ ಬಿಲಾಲ್(ಅಸೀಫ್) 5 ವಿಕೆಟ್ ಕಬಳಿಸಿದ ಬಳಿಕ ಎರಡನೇ ಪಂದ್ಯದಲ್ಲಿ ಅವರನ್ನು ವಾಪಸು ಕರೆಸಲಾಯಿತು. ಒಬ್ಬ ಬೌಲರ್ 15 ಡಿಗ್ರಿ ಮೀರಿ ಬೌಲಿಂಗ್ ಮಾಡಿದರೂ ಅವರನ್ನು ಕರೆಸುವುದಿಲ್ಲ. ಇದು ಪಾಕಿಸ್ತಾನದ ವಿರುದ್ಧ ನಿರ್ಧಾರಗಳು ಪಕ್ಷಪಾತದಿಂದ ಇರುವುದನ್ನು ತೋರಿಸುತ್ತದೆ. ಐಸಿಸಿ ನಿಯಮವನ್ನು ಅನುಸರಿಸುವುದಾದರೆ, ಅವರು ಎಲ್ಲರ ವಿರುದ್ಧ ಅನುಸರಿಸಲಿ ಎಂದು ಹೇಳಿದರು. 
 

ವೆಬ್ದುನಿಯಾವನ್ನು ಓದಿ