ಭಾರತದ ಭದ್ರತೆ ಬಲಿಕೊಟ್ಟು ಪಾಕ್ ಜೊತೆ ಕ್ರಿಕೆಟ್ ಆಡುವುದಿಲ್ಲ: ಬಿಸಿಸಿಐ ಎಚ್ಚರಿಕೆ

ಸೋಮವಾರ, 27 ಜುಲೈ 2015 (18:04 IST)
ಭಾರತೀಯರ ಭದ್ರತೆಯನ್ನು ಅಪಾಯದಲ್ಲಿಟ್ಟು ಭಾರತ-ಪಾಕ್ ಕ್ರಿಕೆಟ್ ಸಂಬಂಧ ಮುಂದುವರಿಯುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಸೋಮವಾರ ತಿಳಿಸಿದ್ದಾರೆ. ಪಂಜಾಬ್‌ನಲ್ಲಿ ಸೋಮವಾರ ಭಯೋತ್ಪಾದನೆ ದಾಳಿಯನ್ನು ಗಮನದಲ್ಲಿಟ್ಟುಕೊಂಡು ಠಾಕೂರ್ ಹೇಳಿದ್ದಾರೆ.

  ನಮ್ಮ ರಾಷ್ಟ್ರದ ಭದ್ರತೆ ಮತ್ತು ಶಾಂತಿಗೆ ಅಪಾಯ ಉಂಟಾದಾಗ ಕ್ರಿಕೆಟ್ ಆಡುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಪಾಕಿಸ್ತಾನ ತಿಳಿದಿರಬೇಕು. ಕ್ರೀಡೆ ಭಿನ್ನವಾಗಿದ್ರೂ, ನಮ್ಮ ಆಂತರಿಕ ಭದ್ರತೆ ಕೂಡ ಅಷ್ಟೇ ಮುಖ್ಯವಾಗಿದೆ ಎಂದು ಠಾಕುರ್ ಹೇಳಿದರು.
 
ಐಸಿಸಿ ಭವಿಷ್ಯದ ಪ್ರವಾಸ ಕಾರ್ಯಕ್ರಮದ ರೀತ್ಯಾ ಕಡುವೈರಿ ಪಾಕಿಸ್ತಾನದ ಜೊತೆ ಭಾರತ ದ್ವಿಪಕ್ಷೀಯ ಸರಣಿ ಆಡಲು ನಿಗದಿಯಾಗಿದ್ದು, ಎರಡು ಟೆಸ್ಟ್ ಮತ್ತು ಐದು ಏಕದಿನ ಪಂದ್ಯಗಳನ್ನು ಅದು ಒಳಗೊಂಡಿದೆ. 
 
ಬಹುನಿರೀಕ್ಷಿತ ಸರಣಿಯನ್ನು ಯುಎಇಯಲ್ಲಿ ಆಡಲಾಗುವುದೆಂದು ನಿರೀಕ್ಷಿಸಲಾಗಿತ್ತು. ಆದರೆ ಪಂಜಾಬ್‌ನಲ್ಲಿ ಸೋಮವಾರ ಭಯೋತ್ಪಾದನೆ ದಾಳಿ ಬಳಿಕ ಉಭಯ ರಾಷ್ಟ್ರಗಳ ನಡುವೆ ಕ್ರಿಕೆಟ್ ಸರಣಿ ಅನುಮಾನಾಸ್ಪದವಾಗಿದೆ. 
 
ಬಿಸಿಸಿಐ ಪಾಕ್ ಜತೆ ಆಡುವ ಮುಂಚೆ ಕೆಲವು ವಿಷಯಗಳನ್ನು ಇತ್ಯರ್ಥಮಾಡಿಕೊಳ್ಳಬೇಕಿದೆ. ಮಾತುಕತೆಗೆ ಮಂಡಳಿಗೆ ಆಕ್ಷೇಪವೇನೂ ಇಲ್ಲ. ಆದರೆ ರಾಷ್ಟ್ರದ ಭದ್ರತೆ ಕೂಡ ಅಷ್ಟೇ ಮುಖ್ಯವಾಗಿದೆ ಎಂದು ಠಾಕುರ್ ಹೇಳಿದರು.  ಠಾಕುರ್ ಬಳಿಕ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ಪಂಜಾಬ್ ಭಯೋತ್ಪಾದನೆ ದಾಳಿಯನ್ನು ಖಂಡಿಸಿದರು. 

 

ವೆಬ್ದುನಿಯಾವನ್ನು ಓದಿ