ನ್ಯೂಜಿಲೆಂಡ್ ಫೈನಲ್ ವೀಕ್ಷಿಸುವುದು ಕ್ಯಾನ್ಸರ್‌ ಪೀಡಿತ ಕ್ರೋವ್‌ ಕೊನೆಯಾಸೆ

ಶನಿವಾರ, 28 ಮಾರ್ಚ್ 2015 (16:42 IST)
ನ್ಯೂಜಿಲೆಂಡ್  ಮಾಜಿ ನಾಯಕ ಮಾರ್ಟಿನ್ ಕ್ರೋವ್ ಮಾರಣಾಂತಿಕ ಲಿಂಫೋಮಾ ಕಾಯಿಲೆಯಿಂದ ನರಳುತ್ತಿದ್ದು, ಅವರು ನ್ಯೂಜಿಲೆಂಡ್ ಕ್ರಿಕೆಟ್ ತಂಡಕ್ಕೆ ಬರೆದಿದ್ದ ಭಾವನಾತ್ಮಕ ಪತ್ರಕ್ಕೆ ಹಾಲಿ ನಾಯಕ ಬ್ರೆಂಡನ್ ಮೆಕಲಮ್ ಸೂಕ್ತವಾಗಿ ಸ್ಪಂದಿಸಿದ್ದು, ಮಾಜಿ ನಾಯಕ ಮತ್ತು ಬ್ಯಾಟಿಂಗ್ ಕಣ್ಮಣಿ 2015ರ ವಿಶ್ವಕಪ್ ಯಶಸ್ಸಿಗೆ ಮತ್ತು ತಂಡದ ಸಿದ್ಧತೆಗಳಿಗೆ ನಿಜವಾಗಲೂ ದೊಡ್ಡ ಆಸ್ತಿ ಎಂದು ಹೇಳಿದ್ದಾರೆ.  ಅವರ ಜೀವನದ ಉಳಿದ ದಿನಗಳಲ್ಲಾದರೂ ದೇವರು ಅವರಿಗೆ ಶಾಂತಿಯನ್ನು ಕರುಣಿಸಲಿ ಎಂದು ಮೆಕಲಮ್ ಪ್ರಾರ್ಥಿಸಿದ್ದಾರೆ. 

ಜೀವನ ಅತ್ಯಂತ ಕಷ್ಟದ ಹಂತದಲ್ಲಿರುವ ಅವರಿಗೆ ಒಳ್ಳೆಯದಾಗಲಿ ಎಂದು ಮೆಕಲಮ್ ಶುಭ ಹಾರೈಸಿದರು. ಮಾರ್ಟಿನ್ ಕ್ರೋವ್ ಅವರಿಗೆ ತಾವು ಲಿಂಫೋಮಾದಿಂದ ನರಳುತ್ತಿರುವುದು 2012ರಲ್ಲಿ ತಿಳಿದುಬಂತು. ಕೆಮೋಥೆರಪಿಯ ಕಠಿಣ ಕೋರ್ಸ್ ಮೂಲಕ ಅದರ ನಿವಾರಣೆಗೆ ಪ್ರಯತ್ನಿಸಿದರು. ಆದರೆ ಕ್ಯಾನ್ಸರ್ ತಮಗೆ ಪುನಃ ಬಂದಿರುವುದಾಗಿ ಕಳೆದ ಸೆಪ್ಟೆಂಬರ್‌ನಲ್ಲಿ ಅವರು ಬಹಿರಂಗಪಡಿಸಿದರು ಮತ್ತು ಅವರ ಆರೋಗ್ಯ ಕ್ಷೀಣಿಸಲಾರಂಭಿಸಿತು.

ಈ ಬಾರಿ ಕ್ರೋವ್ ಚಿಕಿತ್ಸೆಯಿಂದ ಯಾವುದೇ ಪ್ರಯೋಜನವಿಲ್ಲವೆಂದು ಅರಿತು ಅದನ್ನು ನಿರಾಕರಿಸಿದರು.  ಪುನಃ ಕ್ಯಾನ್ಸರ್ ಕಾಣಿಸಿಕೊಂಡಾಗಿನಿಂದ ಇಎಸ್‌ಪಿಎನ್ ಕ್ರಿಕ್‌ಇನ್ಫೋಗೆ ಅನೇಕ ಭಾವನಾತ್ಮಕ ಅಂಕಣಗಳನ್ನು ಬರೆದಿದ್ದರು.  ಇತ್ತೀಚೆಗೆ ಬರೆದ ಪತ್ರದಲ್ಲಿ ಮೆಕಲಮ್ ಮತ್ತು ಅವರ ತಂಡದ ಬಗ್ಗೆ ತುಂಬಾ ಅಭಿಮಾನ ಹೊಂದಿರುವುದಾಗಿ  ಭಾನುವಾರದ ವಿಶ್ವಕಪ್ ಫೈನಲ್ ಪಂದ್ಯವು ತಾವು ವೀಕ್ಷಿಸುವ ಕಟ್ಟಕಡೆಯ ಪಂದ್ಯವೆಂದೂ  ಹೇಳುವ ಮೂಲಕ ತಾವು ಸಾವಿಗೆ ಸಮೀಪದಲ್ಲಿರುವ ಇಂಗಿತ ನೀಡಿದ್ದರು.

 ಬ್ಲಾಕ್ ಕ್ಯಾಪ್ಸ್ ತಂಡದ ಇಬ್ಬರಿಗೆ ಕ್ರೋವ್ ತಮ್ಮ ಪತ್ರದಲ್ಲಿ ಹೃದಯಸ್ಪರ್ಶಿ ಗೌರವವನ್ನುನೀಡಿದ್ದಾರೆ.  ರೋಸ್ ಟೇಲರ್ ಮತ್ತು ಮಾರ್ಟಿನ್ ಗುಪ್ಟಿಲ್ ಅವರು ನನಗಿಲ್ಲದಿರುವ ಇಬ್ಬರು ಮಕ್ಕಳಂತೆ ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ