ಏಕದಿನ ವಿಶ್ವಕಪ್: ಬಲಿಷ್ಠ ಆಫ್ರಿಕಾ ಬೇಟೆಯೂ ಯಶಸ್ವಿಯಾಗಿ ಮುಗಿಸಿದ ಟೀಂ ಇಂಡಿಯಾ
ಭಾನುವಾರ, 5 ನವೆಂಬರ್ 2023 (20:38 IST)
ಕೋಲ್ಕೊತ್ತಾ: ಐಸಿಸಿ ಏಕದಿನ ವಿಶ್ವಕಪ್ ನ ಇಂದಿನ ಪಂದ್ಯದಲ್ಲಿ ಬಲಿಷ್ಠ ದ.ಆಫ್ರಿಕಾವನ್ನು ತನ್ನ ಸ್ಪಿನ್ ಬಲೆಗೆ ಸಿಲುಕಿಸಿದ ಟೀಂ ಇಂಡಿಯಾ 243 ರನ್ ಗಳ ಭರ್ಜರಿ ಜಯ ಗಳಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಎದುರಾಳಿಗಳಿಗೆ 327 ರನ್ ಗಳ ಕಠಿಣ ಗುರಿ ನೀಡಿತು. ಈ ಮೊತ್ತ ಬೆನ್ನತ್ತಿದ ದ.ಆಫ್ರಿಕಾ ಕೇವಲ 83 ರನ್ ಗಳಿಗೆ ಆಲೌಟ್ ಆಯಿತು. ಫಾರ್ಮ್ ನಲ್ಲಿದ್ದ ಬ್ಯಾಟಿಗ ಕ್ವಿಂಟನ್ ಡಿ ಕಾಕ್ ರನ್ನು ಮೊಹಮ್ಮದ್ ಸಿರಾಜ್ ಬಲಿ ಪಡದರು. ಅಲ್ಲಿಂದ ಆಫ್ರಿಕಾ ಕುಸಿತ ಕಾಣುತ್ತಲೇ ಹೋಯಿತು.
ಬಳಿಕ ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ಮೊದಲ ಓವರ್ ನಲ್ಲೇ ವಿಕೆಟ್ ಪಡೆದು ಆಫ್ರಿಕಾ ಮೇಲೆ ಸವಾರಿ ಮಾಡಿದರು. ಮಧ‍್ಯಮ ಕ್ರಮಾಂಕಕ್ಕೆ ಸ್ಪಿನ್ನರ್ ರವೀಂದ್ರ ಜಡೇಜಾ ಸಂಪೂರ್ಣ ಅಂಕುಶ ಹಾಕಿದರು. ಒಟ್ಟು 9 ಓವರ್ ಬೌಲಿಂಗ್ ಮಾಡಿದ ಜಡೆಜಾ 33 ರನ್ ನೀಡಿ ಐದು ವಿಕೆಟ್ ಗಳ ಗೊಂಚಲು ಪಡೆದರು. ಇನ್ನೊಂದೆಡೆ ಕುಲದೀಪ್ ಯಾದವ್ 2 ವಿಕೆಟ್ ತಮ್ಮದಾಗಿಸಿಕೊಂಡರು. ಬುಮ್ರಾ ಇಂದು ವಿಕೆಟ್ ಪಡೆಯಲು ವಿಫಲರಾದರು. ಆಫ್ರಿಕಾ ಪರ ಕೇವಲ ನಾಲ್ವರು ಎರಡಂಕಿಯ ಮೊತ್ತ ತಲುಪಿದರು. ಹಾಗಿದ್ದರೂ ಒಬ್ಬನೇ ಒಬ್ಬ ಬ್ಯಾಟಿಗನೂ 20 ರ ಮೊತ್ತ ದಾಟಲಿಲ್ಲ. ಮಾರ್ಕೊ ಜೇನ್ಸನ್ 14 ರನ್ ಗಳಿಸಿದ್ದೇ ಗರಿಷ್ಠ ಸ್ಕೋರ್. ಅಂತಿಮವಾಗಿ ಆಫ್ರಿಕಾ 27.1 ಓವರ್ ಗಳಲ್ಲಿ 83 ರನ್ ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಟೀಂ ಇಂಡಿಯಾ ಎಂಟರಲ್ಲಿ ಎಂಟು ಜಯ ಕಂಡು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಖಚಿತಪಡಿಸಿತು.