ಟೀಂ ಇಂಡಿಯಾ ನಾಯಕ ಧೋನಿ ಮುಟ್ಟಿದ್ದೆಲ್ಲಾ ಚಿನ್ನವಾಗುವ ಗುಣ ಕಳೆದುಕೊಂಡಿದ್ದಾರೆಯೇ ?

ಶುಕ್ರವಾರ, 27 ಮಾರ್ಚ್ 2015 (10:59 IST)
ಮಹೇಂದ್ರ ಸಿಂಗ್ ಧೋನಿ ಅವರನ್ನು 2007ರಲ್ಲಿ ವಿಶ್ವ ಟಿ ಟ್ವೆಂಟಿ ಪಂದ್ಯಾವಳಿಗೆ ಭಾರತದ ನಾಯಕನಾಗಿ ಅಚ್ಚರಿಯ ನೇಮಕ ಮಾಡಿದಾಗ, ಅವರು  ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಪ್ರತಿಕ್ರಿಯಿಸಿದರು. ಎರಡು ವರ್ಷಗಳ ಬಳಿಕ, ಭಾರತ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದಾಗ ಭಾರತ ಕ್ರಿಕೆಟ್‌ನಲ್ಲಿ ಪ್ರಭುತ್ವ ಹೊಂದಿತ್ತು. ಇನ್ನೂ ಎರಡು ವರ್ಷಗಳ ಬಳಿಕ ಮುಂಬೈನ ಸ್ವದೇಶಿ ಅಭಿಮಾನಿಗಳ ನಡುವೆ ಎರಡನೇ ವಿಶ್ವಕಪ್ ಗೆಲುವಿಗೆ ಧೋನಿ ಕಾರಣಕರ್ತರಾದರು.

 ಆದರೆ ಧೋನಿ ಮ್ಯಾಜಿಕ್  ನಿರಂತರವಾಗಿ ಉಳಿದಿಲ್ಲ. ಧೋನಿ ಈಗಲೂ ಸೀಮಿತ ಓವರುಗಳ ಉತ್ತಮ ಆಟಗಾರ ಎಂದು ಪರಿಗಣಿಸಲಾಗಿದ್ದರೂ ಪ್ರಮುಖ ಪಂದ್ಯಾವಳಿಗಳಲ್ಲಿ ಜಯ ಪಡೆಯುವ ಅವರ ಅಸಾಧಾರಣ ಸಾಮರ್ಥ್ಯವು ದೂರವುಳಿದ ಹಾಗೆ ಕಾಣುತ್ತಿದೆ.  ಧೋನಿ ಮುಟ್ಟಿದ್ದೆಲ್ಲ ಚಿನ್ನವಾಗುವ ಅವರ ಮೈದಾಸ್ ಟಚ್ ಕಳೆದುಕೊಂಡಿದ್ದಾರೆಯೇ ಎಂಬ ಪ್ರಶ್ನೆ ಈಗ ಮೂಡಿದೆ.
 
ಕಳೆದ ವರ್ಷ ವಿಶ್ವ ಕಪ್ ಟಿ 20 ಫೈನಲ್‌ನಲ್ಲಿ ಭಾರತವನ್ನು ಶ್ರೀಲಂಕಾ ಸೋಲಿಸಿತು. ನಿನ್ನೆ ಗುರುವಾರ ಸಿಡ್ನಿ ಮೈದಾನದಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ  ಭಾರತ 95 ರನ್‌ಗಳಿಂದ ಸೋತಿತು. 
 
ಈಗ ಮೂಡಿರುವ ಪ್ರಶ್ನೆ ಧೋನಿ ತಮ್ಮ ನಾಯಕತ್ವ ಬಿಟ್ಟುಕೊಡುತ್ತಾರಾ ಅಥವಾ  ಏಕದಿನ ಕ್ರಿಕೆಟ್ ಆಡುವುದನ್ನೇ ತ್ಯಜಿಸುತ್ತಾರಾ ಎನ್ನುವುದಾಗಿದೆ. 
 ಕಳೆದ ಡಿಸೆಂಬರ್‌ನಲ್ಲಿ ಧೋನಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಆಘಾತಕಾರಿ ನಿರ್ಧಾರ ಘೋಷಿಸಿದರು. ಈ ಬಾರಿ ಪಂದ್ಯದ ನಂತರ ಬಹುಮಾನ ವಿತರಣೆ ಸಮಾರಂಭದಲ್ಲಿ ಏಕ ದಿನ ಪಂದ್ಯದಲ್ಲಿ ತಾವು ನಿವೃತ್ತಿಯಾಗುವ ಬಗ್ಗೆ ಮುಂದಿನ ವರ್ಷ ವಿಶ್ವ ಟ್ವೆಂಟಿ 20ಯ ನಂತರ ನಿರ್ಧರಿಸುವುದಾಗಿ ತಿಳಿಸಿದರು. ಆಸ್ಟ್ರೇಲಿಯಾ ನಾಯಕ ಮೈಕೇಲ್ ಕ್ಲಾರ್ಕ್ ಕೂಡ ಧೋನಿ ಕಾಲ ಇನ್ನೂ ಮುಗಿದಿಲ್ಲ ಎಂದು ಹೇಳಿದ್ದಾರೆ.

ಏತನ್ಮಧ್ಯೆ, ಭಾರತದ ಸೋಲಿಗೆ 300 ಪ್ಲಸ್ ಗುರಿಯನ್ನು ಚೇಸ್ ಮಾಡುವ ಒತ್ತಡವೇ ಕಾರಣವೆಂದು ಬ್ಯಾಟಿಂಗ್ ಗ್ರೇಟ್ ಸುನಿಲ್ ಗವಾಸ್ಕರ್  ಹೇಳಿದ್ದಾರೆ. ಆದರೂ ಆಸ್ಟ್ರೇಲಿಯಾ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಭಾರತವನ್ನು ಮೀರಿಸಿತೆಂದು ತಿಳಿಸಿದರು.  ದೊಡ್ಡ ಫೈನಲ್‌ನ ಒತ್ತಡದಲ್ಲಿ ಭಾರತ ಕುಸಿಯಿತು. ಬ್ಯಾಟ್ಸಮನ್‌ಗಳು ಕೆಲವು ಬೇಜವಾಬ್ದಾರಿ ಶಾಟ್ ಹೊಡೆದು ಔಟಾದರು ಎಂದು ಗವಾಸ್ಕರ್ ಹೇಳಿದರು.

2011ರಲ್ಲಿ ಬ್ಯಾಟಿಂಗ್ ದಾಖಲೆ ನಿರ್ಮಿಸಿದ ಸಚಿನ್ ತೆಂಡೂಲ್ಕರ್ ಮತ್ತು ಇತರೆ ಅನುಭವಿ ಆಟಗಾರರರಾದ ವೀರೇಂದ್ರ ಸೆಹ್ವಾಗ್, ಗಂಭೀರ್, ಯುವರಾಜ್ ಸಿಂಗ್ , ಜಹೀರ್ ಖಾನ್, ಹರ್ಬಜನ್ ನೆರವಿನಿಂದ ಭಾರತ ಗೆಲುವು ಗಳಿಸಿತ್ತು. ಈಗ ಧೋನಿ ಮೈದಾಸ್ ಟಚ್ ಕಳೆದುಕೊಂಡಂತೆ ಕಂಡರೂ ಮಾಜಿ ನಾಯಕ ಸೌರವ್ ಗಂಗೂಲಿ ಆತ್ಮವಿಶ್ವಾಸದ ನುಡಿಯನ್ನು ಹೇಳಿದ್ದಾರೆ. ಈ ತಂಡದ ಮೇಲೆ ನಂಬಿಕೆ ಇಡಿ. ಭವಿಷ್ಯದಲ್ಲಿ ಅವರು ಪಂದ್ಯಗಳನ್ನು ಗೆದ್ದುಕೊಡುತ್ತಾರೆ. ಭಾರತದ ಕ್ರಿಕೆಟ್‌‍ಗೆ ಭವ್ಯ ಭವಿಷ್ಯವಿದೆ ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ